ಹೊಸಬರ ಹೊಸ ಹೊಸ ಆವಿಷ್ಕಾರಗಳು ಸ್ಯಾಂಡಲ್ವುಡ್ನಲ್ಲಿ ಸೃಷ್ಟಿಯಾಗುತ್ತಿವೆ. ಕಾಲ್ಪನಿಕ ಕಥೆಗಳನ್ನು ಹೆಣೆದು, ಅದಕ್ಕೆ ಫ್ಯಾಂಟಸಿ ಸ್ಪರ್ಶ ಕೊಡುವ ಕೆಲಸ ನಡೆಯುತ್ತಿದೆ. ಇದೀಗ ಅಂಥದ್ದೇ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವೊಂದು ಚಂದನವನದಲ್ಲಿ ಸಿದ್ಧವಾಗಿದೆ. ಆ ಚಿತ್ರದ ಹೆಸರು ‘ಫ್ಯಾಂಟಸಿ’.
ಪವನ್ ಡ್ರೀಮ್ ಫಿಲಂಸ್ ಲಾಂಛನದಲ್ಲಿ ಸಿದ್ಧವಾಗಿರುವ ‘ಫ್ಯಾಂಟಸಿ’ ಚಿತ್ರಕ್ಕೆ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಪವನ್ ಕುಮಾರ್ ಆರ್. ನಿರ್ದೇಶಕರ ತಂದೆ ತಾಯಿಯವರಾದ ಎಂ. ಮಹಾದೇವಿ, ಟಿ. ರಂಗಸ್ವಾಮಿ ಸಹ- ನಿರ್ಮಾಪಕರಾಗಿದ್ದಾರೆ.
ಶೀರ್ಷಿಕೆಗೆ ತಕ್ಕಂತೆ ಭ್ರಮೆ ಮತ್ತು ವಾಸ್ತವದ ನಡುವೆ ಇಡೀ ಕಥೆ ತೆರೆದುಕೊಳ್ಳಲಿದ್ದು, ರೋಚಕ ಟ್ವಿಸ್ಟ್ಗಳು ಕುತೂಹಲ ಮೂಡಿಸುತ್ತ ಸಾಗಲಿದೆ. ಸದ್ಯ ಸಂಕಲನದ ಕೆಲಸ ನಡೆಯುತ್ತಿದ್ದು, ಗುರುವಾರ ಪವನ್ ಡ್ರೀಮ್ ಫಿಲಂಸ್ ಯೂಟ್ಯೂಬ್ ಚಾನೆಲ್ನಲ್ಲಿ ಚಿತ್ರದ ಟೀಸರ್ ಬಿಡುಗಡೆ ಆಗಿದೆ.
ನಿರ್ದೇಶಕ ಗುರು ದೇಶಪಾಂಡೆ ‘ಸಂಹಾರ’ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಚಂದನವನಕ್ಕೆ ಬಂದ ಪವನ್, ಬಳಿಕ ‘ಅಮ್ಮ ಐ ಲವ್ ಯೂ’, ‘ಆದ್ಯಾ’ ಸಿನಿಮಾಗಳಲ್ಲಿ ನಿರ್ದೇಶಕ ಕೆ.ಎಂ. ಚೈತನ್ಯ ಅವರೊಂದಿಗೆ ಕೆಲಸ ಮಾಡಿದ್ದಾರೆ. ಒಂದರ್ಥದಲ್ಲಿ ಸಿನಿಮಾರಂಗಕ್ಕೆ ಬರುವುದಕ್ಕೆ ಚಿರು ಸರ್ಜಾ ಅವರೇ ಕಾರಣರಾದರೆ, ನಿರ್ದೇಶನದ ಪಾಠವನ್ನು ಚೈತನ್ಯ ಅವರಿಂದ ಕಲಿತಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ಸೀಸನ್ 3ರಲ್ಲಿ ಅಂತಿಮ ಹಂತ ತಲುಪಿದ್ದ ಸ್ಪರ್ಧಿ ಅನುರಾಗ್, ‘ಫ್ಯಾಂಟಸಿ’ ಸಿನಿಮಾದ ಕೇಂದ್ರ ಬಿಂದು. ಚಿತ್ರದಲ್ಲಿ ಆತನ ಮಾನಸಿಕ ಸ್ಥಿತಿಗತಿ ಹೇಗೆಲ್ಲ ಬದಲಾಗುತ್ತದೆ. ಅದರಿಂದ ಎದುರಾಗುವ ಅನಾಹುತಗಳೇನು ಎಂಬುದೇ ‘ಫ್ಯಾಂಟಸಿ’ ಚಿತ್ರದ ತಿರುಳು.
ಕಿರುತೆರೆ ಮತ್ತು ಬಿಗ್ಬಾಸ್ ಮೂಲಕ ಮನೆಮಾತಾಗಿರುವ ನಟಿ ಪ್ರಿಯಾಂಕಾ ಈ ಸಿನಿಮಾದಲ್ಲಿ ನಟಿಸಿದ್ದು, ನೆಗೆಟಿವ್ ರೀತಿಯ ಪಾತ್ರ ನಿಭಾಯಿಸಿದ್ದಾರೆ. ಇನ್ನುಳಿದಂತೆ ಮೈಸೂರು ಬಾಲ, ಹರಿಣಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ ‘99’ ಚಿತ್ರದಲ್ಲಿ ಯಂಗರ್ ಗಣೇಶ್ ಪಾತ್ರ ಮಾಡಿದ್ದ ಹೇಮಂತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇಡೀ ಸಿನಿಮಾ ಬೆಂಗಳೂರು ಸುತ್ತ ಮುತ್ತ 23 ದಿನಗಳ ಕಾಲ ಚಿತ್ರೀಕರಣವಾಗಿದ್ದು, ಮಡಿಕೇರಿಯಲ್ಲಿ 3 ದಿನ ಬೆಂಗಳೂರಿನಲ್ಲಿ ಒಂದು ದಿನದ ಚಿತ್ರೀಕರಣ ಬಾಕಿ ಇದೆ.
ತಾಂತ್ರಿಕ ವರ್ಗದಲ್ಲಿಯೂ ನುರಿತ ತಂತ್ರಜ್ಱರೇ ಸಿನಿಮಾಕ್ಕೆ ಕೆಲಸ ಮಾಡಿದ್ದಾರೆ. ಪಿ.ಕೆ.ಎಚ್. ದಾಸ್ ಛಾಯಾಗ್ರಹಣ, ಆರ್ ಎಸ್. ಗಣೇಶ್ ನಾರಾಯಣ್ ಮತ್ತು ಶಶಿರಾಮ್ ಎಂಬುವವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.
Be the first to comment