ಸಿನಿಮಾ ಮಾಡುವುದಾಗಿ ನಂಬಿಸಿ ಬಿಗ್ ಬಾಸ್ 11ರ ಸ್ಪರ್ಧಿ ಹಾಗೂ ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ನೀಡಿದ ನಕಲಿ ನಿರ್ಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ.
ಅನ್ನಪೂರ್ಣೇಶ್ವರಿ ನಗರದ ನಿವಾಸಿ ಹೇಮಂತ್ ಕುಮಾರ್ (34) ಬಂಧಿತ ಆರೋಪಿ. ನಟಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
2022ರಲ್ಲಿ ನಟಿಯ ಸಂಪರ್ಕಕ್ಕೆ ಬಂದ ಆರೋಪಿ, ರಿಚ್ಚಿ ಹೆಸರಿನ ಚಿತ್ರ ನಿರ್ಮಾಣ ಮಾಡುವುದಾಗಿ ಹೇಳಿ ನಟಿಗೆ ನಾಯಕಿಯ ಪಾತ್ರಕ್ಕಾಗಿ 2 ಲಕ್ಷ ರೂಪಾಯಿ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದ. ಈ ಸಂದರ್ಭ 60 ಸಾವಿರ ರೂ.ಗಳನ್ನು ಮುಂಗಡ ನೀಡಿದ್ದ.
ಚಿತ್ರೀಕರಣ ಆರಂಭ ಮಾಡಿದ್ದ ಆರೋಪಿ ಆನಂತರ ನಿಗದಿತ ಸಮಯದಲ್ಲಿ ಚಿತ್ರೀಕರಣ ಮಾಡದೆ ಫಿಲಂ ಚೇಂಬರ್ ಸಮ್ಮುಖದಲ್ಲಿ ಒಪ್ಪಂದವನ್ನು ಮುಂದುವರಿಸಿದ್ದ. ಚಿತ್ರೀಕರಣದ ವೇಳೆ ತುಂಡು ಉಡುಗೆ ಧರಿಸುವಂತೆ ಒತ್ತಾಯ ಮಾಡಿದ್ದ. ಚಿತ್ರದ ಪ್ರಚಾರಕ್ಕಾಗಿ ಮುಂಬೈಗೆ ತೆರಳಿದ್ದಾಗ ನಟಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದ. ಪ್ರಚಾರದ ವೇಳೆ ಒಬ್ಬರೇ ಬರುವಂತೆ ಒತ್ತಾಯ ಮಾಡಿದ್ದ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿ ನೀಡಿದ ಚೆಕ್ ಬೌನ್ಸ್ ಆದ ಹಿನ್ನೆಲೆಯಲ್ಲಿ ನಟಿ ಈ ಬಗ್ಗೆ ವಿಚಾರಿಸಿದಾಗ ಬೆದರಿಕೆ ಹಾಕಿದ್ದ. ಅಲ್ಲದೇ ಚಿತ್ರದ ಸೆನ್ಸಾರ್ ಆಗದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಈ ಬಗ್ಗೆ ನಟಿ ಸ್ಟೇ ತಂದಿರುವುದಾಗಿ ತಿಳಿಸಿದ್ದಾರೆ.
ಸೆ.17ರಂದು ಆರೋಪಿ ನಟಿಯ ಮನೆಗೆ ಬಂದು ತಾಯಿ ಹಾಗೂ ನಟಿ ಇಬ್ಬರಿಗೆ ಬೆದರಿಕೆ ಹಾಕಿದ್ದಾನೆ. ರೌಡಿಗಳನ್ನು ಮನೆಯ ಮುಂದೆ ಬಿಟ್ಟಿದ್ದಾನೆ ಎಂದು ನಟಿ ದೂರಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನಟಿ ಕೋರಿದ್ದಾರೆ.





Be the first to comment