ಗೋಲ್ಡನ್ ಸ್ಟಾರ್’ ಗಣೇಶ್-ಯೋಗರಾಜ್ ಭಟ್ ಕಾಂಬಿನೇಷನ್‌ನ ‘ಗಾಳಿಪಟ 2’ ಚಿತ್ರದ ಎಕ್ಸಾಮ್ ಸಾಂಗ್ ರಿಲೀಸ್ ಆಗಿದ್ದು ನಂ.1 ಟ್ರೆಂಡಿಂಗ್ ಎನಿಸಿದೆ.
ಈ ಬಗ್ಗೆ ಯೋಗ ರಾಜ್ ಭಟ್ ಖುಷಿಯಿಂದ ಮಾಹಿತಿ ಹಂಚಿಕೊಂಡಿದ್ದಾರೆ. ಹಾಡಿನಲ್ಲಿ ಎಲ್ಲ ಸಬ್ಜೆಕ್ಟ್ ನಲ್ಲಿ ಫೇಲ್ ಆಗುವ ವಿದ್ಯಾರ್ಥಿ ಅದನ್ನು ಬುದ್ಧಿವಂತಿಕೆಯಿಂದ ವಿವರಿಸುವ ಸನ್ನಿವೇಶ ಇದೆ. ಇದನ್ನು ಕೆಲ ಲಕ್ಷ ಜನರು ವೀಕ್ಷಣೆ ಮಾಡಿ ಖುಷಿ ಪಟ್ಟಿದ್ದಾರೆ.
ಚಿತ್ರದಲ್ಲಿ ಗಣೇಶ್ ಅವರೊಂದಿಗೆ ದಿಗಂತ್, ಪವನ್ ಕುಮಾರ್ ಜೊತೆಯಾಗಿದ್ದಾರೆ. ಹಿರಿಯ ನಟ ಅನಂತ್ ನಾಗ್ ಅವರು ಕನ್ನಡ ಮೇಷ್ಟ್ರ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾದಲ್ಲಿ ಗಣೇಶ್ ಅವರ ಪುತ್ರ ವಿಹಾನ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಈ ಭಾಗದ ಚಿತ್ರೀಕರಣ ಬೆಂಗಳೂರು, ಕಝಕಿಸ್ಥಾನದಲ್ಲಿ ಮಾಡಲಾಗಿದೆ.
ಈ ಚಿತ್ರ ಕುದುರೆಮುಖದ ಪ್ರಕೃತಿ ಸೌಂದರ್ಯದಲ್ಲಿ ಚಿತ್ರೀಕರಣ ಆಗಿದ್ದು, ನೋಡುಗರಿಗೆ ಹೊಸ ಅನುಭವ ನೀಡಲಿದೆ. ಅನಂತನಾಗ್ ಮತ್ತು ಮೂರು ಜನ ನಾಯಕರ ನಡುವಿನ ದೃಶ್ಯಗಳು ಸಿನಿಮಾದಲ್ಲಿ ಬಹಳ ಮುಖ್ಯ ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ.
ಸಿನಿಮಾ ರಿಲೀಸ್‌ಗೂ ಮುನ್ನ ನಿರ್ಮಾಪಕರಿಗೆ ದೊಡ್ಡ ಲಾಭ ಮಾಡಿಕೊಡುವಲ್ಲಿ ಯಶಸ್ವಿ ಆಗಿದೆ. ‘ಗಾಳಿಪಟ 2’ ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ಜೀ ಕನ್ನಡ ವಾಹಿನಿ ಪಡೆದುಕೊಂಡಿದೆ. ಚಿತ್ರದ ಓಟಿಟಿ ಹಕ್ಕುಗಳು ಜೀ5 ಪಾಲಾಗಿವೆ. ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಪಡೆದುಕೊಂಡಿದೆ. ನಿರ್ಮಾಪಕರಿಗೆ ಇದರಿಂದ 8 ಕೋಟಿ ರೂ. ಸಿಕ್ಕಿದ್ದು, ಬಿಡುಗಡೆಗೂ ಮುನ್ನವೇ ನಿರ್ಮಾಪಕ ರಮೇಶ್ ರೆಡ್ಡಿ ಯಶಸ್ಸು ಕಂಡಿದ್ದಾರೆ.
‘ಗಾಳಿಪಟ 2’ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಸಿನಿಮಾಟೋಗ್ರಫಿ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಗಣೇಶ್ ಜೊತೆಗೆ ಸಂಯುಕ್ತಾ ಮೆನನ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ ಸೇರಿದಂತೆ ಅನೇಕರು ನಟಿಸಿದ್ದಾರೆ.
___
Be the first to comment