ಚಿತ್ರ: ಏಳುಮಲೆ
ನಿರ್ದೇಶಕ: ಪುನೀತ್ ರಂಗಸ್ವಾಮಿ
ನಿರ್ಮಾಪಕರು: ತರುಣ್ ಕಿಶೋರ್ ಸುಧೀರ್, ಅಟ್ಲಾಂಟಾ ನಾಗೇಂದ್ರ
ತಾರಾ ಬಳಗ: ರಾಣಾ, ಕಿಶೋರ್, ನಾಗಾಭರಣ, ಜಗಪತಿ ಬಾಬು, ಸರ್ದಾರ್ ಸತ್ಯ, ಇತರರು
ರೇಟಿಂಗ್: 4/5
ಕುತೂಹಲಭರಿತ ಮರೆಯಲಾಗದ ಪ್ರೇಮಕಥೆಯಾಗಿ ಈ ವಾರ ತೆರೆಯ ಮೇಲೆ ಬಂದಿರುವ ಚಿತ್ರ ಏಳುಮಲೆ.
ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟ್, ಟರ್ನ್ ಗಳಿವೆ. ಸಾಮಾನ್ಯ ಪ್ರೇಮ ಕಥೆಯಂತೆ ಈ ಚಿತ್ರಕಥೆ ಇರದೇ ಕಾಡುವ ನಿಷ್ಕಲ್ಮಶ ಪ್ರೀತಿಯ ಸಿನಿಮಾವಾಗಿ ಏಳುಮಲೆ ಪ್ರೇಕ್ಷಕರನ್ನು ಕಾಡುತ್ತದೆ.
ಚಿತ್ರದ ನಾಯಕ ಮೈಸೂರಿನ ಕ್ಯಾಬ್ ಡ್ರೈವರ್. ಬಾಡಿಗೆಗಾಗಿ ಊಟಿಗೆ ಹೋಗಿದ್ದ ಅವನು ರಾತ್ರಿ ಕಳೆದರೆ ಬೆಳಗ್ಗೆ ಮೈಸೂರಿಗೆ ಹೋಗಲೇಬೇಕು. ಚಿತ್ರದ ನಾಯಕಿ ತಮಿಳುನಾಡಿನ ಶ್ರೀಮಂತ ಕುಟುಂಬದ ಹುಡುಗಿ. ಅವಳು ತಮಿಳುನಾಡಿನಿಂದ ಮೈಸೂರಿಗೆ ಹೋಗಿ ಪ್ರಿಯಕರನ್ನು ಭೇಟಿ ಮಾಡಲೇಬೇಕು. ರಾತ್ರಿ ಕಳೆದರೆ ಮರು ದಿವಸ ಅವಳ ಮದುವೆ. ರಾತ್ರಿ ಕಳೆದ ನಂತರ ಇಬ್ಬರ ಬದುಕಿನಲ್ಲೂ ನಡೆಯಬಾರದ ಘಟನೆ ನಡೆಯುತ್ತದೆ. ತಾನು ಮಾಡದ ತಪ್ಪಿಗೆ ಚಿತ್ರದ ನಾಯಕ ವ್ಯಥೆ ಪಡುವಂತಾಗುತ್ತದೆ. ಅದು ಏನು ಎನ್ನುವುದನ್ನು ನೋಡಲು ಚಿತ್ರವನ್ನು ವೀಕ್ಷಣೆ ಮಾಡಬೇಕಿದೆ.
ಯಾವುದೇ ಗೊಂದಲ ಇಲ್ಲದೆ ಸಾಗುವ ಈ ಚಿತ್ರದಲ್ಲಿ ಮೂರು – ನಾಲ್ಕು ಆಯಾಮಗಳಲ್ಲಿ ಕತೆ ಸಾಗುತ್ತದೆ. ಕ್ಲೈಮ್ಯಾಕ್ಸ್ ಚಿತ್ರಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ಚಿತ್ರದ ಕಥೆಗಾಗಿ ಅಲ್ಲಲ್ಲಿ ತಮಿಳು ಮಿಶ್ರಿತ ಕನ್ನಡ ಭಾಷೆಯನ್ನು ಬಳಕೆ ಮಾಡಲಾಗಿದೆ.
ಚಿತ್ರದ ನಾಯಕ ರಾಣಾ ಉತ್ತಮವಾಗಿ ನಟಿಸಿದ್ದಾರೆ. ನಾಯಕಿ ಪ್ರಿಯಾಂಕಾ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಕಿಶೋರ್ ತೆರೆಯ ಮೇಲೆ ಆರ್ಭಟಿಸಿದ್ದಾರೆ. ನಾಗಾಭರಣ, ಜಗಪತಿ ಬಾಬು, ಸರ್ದಾರ್ ಸತ್ಯ ಅವರ ನಟನೆ ಗಮನ ಸೆಳೆಯುತ್ತದೆ.
ಅದ್ವೈತ್ ಗುರುಮೂರ್ತಿ ಅವರ ಕ್ಯಾಮರಾ ಕೈಚಳಕ ಚೆನ್ನಾಗಿ ಮೂಡಿ ಬಂದಿದೆ. ಕೆ ಎಂ ಪ್ರಕಾಶ ಅವರ ಸಂಕಲನ ಚಿತ್ರದ ವೇಗವನ್ನು ಹೆಚ್ಚಿಸಿದೆ.
ಕಾಡುವ ಪ್ರೇಮಕಥೆಯಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವ ಚಿತ್ರವಾಗಿ ಏಳುಮಲೆ ಮೂಡಿ ಬಂದಿದೆ.





Be the first to comment