ಹೊಸಬರ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಚಿತ್ರ ಫೆಬ್ರವರಿ 21 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ನಿರ್ದೇಶಕ ಹಯವದನ ‘ಈ ಸಿನಿಮಾ ಮೂಲ ಪಾತ್ರವು ಹಿಮಾಲಯವನ್ನು ತಲುಪುತ್ತದೆ. ಆ ಪ್ರಯಾಣಕ್ಕೆ ಒಂದು ಉದ್ದೇಶ ಇದೆ. ಈ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗಲಿದೆ. ಎಲ್ಲೋ ಜೋಗಪ್ಪ ನಿನ್ನ ಅರಮನೆ ಎಂಬುದು ಜನಪದ ಗೀತೆಯ ಸಾಲು. ಹಾಗೆಯೇ ‘ಜೋಗಿ’ ಸಿನಿಮಾದ ಹಾಡಿನಲ್ಲೂ ಈ ಸಾಲು ಬಳಕೆ ಆಗಿದೆ. ನಮ್ಮ ಕಥೆ ಈ ಶೀರ್ಷಿಕೆಗೆ ನ್ಯಾಯ ಸಲ್ಲಿಸುತ್ತದೆ’ ಎಂದಿದ್ದಾರೆ.
ನಾಯಕ ನಟ ಅಂಜನ್ ನಾಗೇಂದ್ರ ‘ಈ ಚಿತ್ರಕ್ಕಾಗಿ ಇಡೀ ಇಂಡಿಯಾ ಸುತ್ತಿದ್ದೇನೆ. ಇದು ಒಂದು ಜರ್ನಿ ಸಿನಿಮಾ. ತಂದೆ ಮತ್ತು ಮಗನ ಬಾಂಧವ್ಯದ ಕಹಾನಿ ಇದೆ. ಬೆಂಗಳೂರಿನಿಂದ ಶುರುವಾದ ಪ್ರಯಾಣ ಹಿಮಾಲಯದವರೆಗೆ ಹೋಗುತ್ತದೆ. ಭಾವನಾತ್ಮಕವಾದ ಈ ಸಿನಿಮಾ ಯುವ ಜನರಿಗೆ ಹೆಚ್ಚು ಮನರಂಜನೆ ನೀಡುತ್ತದೆ’ ಎಂದು ಹೇಳಿದ್ದಾರೆ.
ಹಲವು ರಾಜ್ಯಗಳ ಅನೇಕ ಲೊಕೇಷನ್ಗಳಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಅಂಜನ್ ನಾಗೇಂದ್ರ ಮತ್ತು ವೆನ್ಯಾ ರೈ ಅವರು ಜೋಡಿಯಾಗಿ ನಟಿಸಿದ್ದಾರೆ. ಸಂಜನಾ ದಾಸ್ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಬಿರಾದರ್, ಶರತ್ ಲೋಹಿತಾಶ್ವ, ದಾನಪ್ಪ, ಸ್ವಾತಿ, ದಿನೇಶ್ ಮಂಗಳೂರು, ಲಕ್ಷ್ಮೀ ನಾಡಗೌಡ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಶಿವ ಪ್ರಸಾದ್ ಸಂಗೀತ, ನಟರಾಜ್ ಮದ್ದಾಲ ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಈ ಚಿತ್ರಕ್ಕಿದೆ. ಪ್ರಮೋದ್ ಮರವಂತೆ ಮತ್ತು ರವೀಂದ್ರ ಮುದ್ದಿ ಸಾಹಿತ್ಯ , ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ನರಸಿಂಹ ಸಾಹಸ ನಿರ್ದೇಶನ ಸಿನಿಮಾಗಿದೆ.
‘ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್’ ಮತ್ತು ‘ಕೃಷ್ಣಛಾಯಾ ಚಿತ್ರ’ ಬ್ಯಾನರ್ ಮೂಲಕ ಪವನ್ ಸಿಮಿಕೇರಿ ಹಾಗೂ ಸಿಂಧು ಹಯವದನ ಅವರು ‘ಎಲ್ಲೋ ಜೋಗಪ್ಪ ನಿನ್ನರಮನೆ’ ಸಿನಿಮಾ ನಿರ್ಮಾಣ ಮಾಡಿದ್ದಾರೆ.

Be the first to comment