ಆರಂಭದಿಂದ ಇಲ್ಲಿಯವರೆಗೂ ನಾನಾ ರೀತಿಯಲ್ಲಿ ಭರವಸೆ ಮೂಡಿಸುತ್ತಾ ಬಂದಿರುವ ಸಿನಿಮಾ ‘ಎಲ್ಲೋ ಜೋಗಪ್ಪ ನಿನ್ನರಮನೆ’. ‘ಹೌದಾ ಹುಲಿಯಾ’ ಹಾಡಿಗೆ ಭರಪೂರ ಮೆಚ್ಚುಗೆ ಸಿಕ್ಕ ಬೆನ್ನಲ್ಲೇ ಚಿತ್ರತಂಡ ಎರಡನೇ ಹಾಡನ್ನು ಅನಾವರಣ ಮಾಡಿದೆ. ಜಾಂಕರ್ ಮ್ಯೂಸಿಕ್ ಯೂಟ್ಯೂಬ್ ನಲ್ಲಿ ‘ಜಾಣಮರಿ’ ಗೀತೆ ಬಿಡುಗಡೆ ಮಾಡಲಾಗಿದೆ. ಪ್ರಮೋದ್ ಮರವಂತೆ ಕ್ಯಾಚಿ ಮ್ಯಾಚಿ ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕಿ ರಕ್ಷಿತಾ ಸುರೇಶ್ ಹಾಗೂ ವಿಶಾಕ್ ನಾಗಲಾಪುರ ಧ್ವನಿಯಾಗಿದ್ದಾರೆ. ಜಾಣಮರಿ ಪ್ರೇಮಗೀತೆಗೆ ಶಿಯೋಮ್ ಟ್ಯೂನ್ ಹಾಕಿದ್ದಾರೆ.
ಹಾಡಿನಲ್ಲಿ ಅಂಜನ್ ನಾಗೇಂದ್ರ ಹಾಗೂ ವೆನ್ಯಾ ರೈ ಜೋಡಿಯಾಗಿ ಮಿಂಚಿದ್ದಾರೆ. ಕನ್ನಡ ಹುಡ್ಗನಾಗಿ ಅಂಜನ್ ಕಾಣಿಸಿಕೊಂಡ್ರೆ, ವೆನ್ಯಾ ರೈ ಮರಾಠಿ ಹುಡ್ಗಿಯಾಗಿ ಅಭಿನಯಿಸಿದ್ದಾರೆ. ಮಹಾರಾಷ್ಟ್ರದ ಪಂಢರಪುರದಲ್ಲಿ ಇಡೀ ಹಾಡನ್ನು ಚಿತ್ರೀಕರಣ ಮಾಡಿರುವುದು ವಿಶೇಷ. ನಾಯಕ ಹಾಗೂ ನಾಯಕಿ ನಡುವಿನ ಸುಮಧುರ ಪ್ರೇಮಗೀತೆ ಇದಾಗಿದ್ದು, ಸಂಗೀತ ಪ್ರಿಯರನ್ನು ಗುನುಗುವಂತೆ ಮಾಡಿದೆ.
ಚಿತ್ರದಲ್ಲಿ ಸಂಜನಾ ದಾಸ್ ಕೂಡ ಒಂದು ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಬಿರಾದರ್, ಶರತ್ ಲೋಹಿತಾಶ್ವ, ದಾನಪ್ಪ, ಸ್ವಾತಿ, ದಿನೇಶ್ ಮಂಗಳೂರು, ಲಕ್ಷ್ಮೀ ನಾಡಗೌಡ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲೋ ಜೋಗಪ್ಪ ನಿನ್ನರಮನೆ ಜರ್ನಿಯ ಕಥಾನಕ. ಜೊತೆಗೆ ಅಪ್ಪನ ಮಗನ ಬಾಂಧವ್ಯದ ಎಳೆಯೂ ಚಿತ್ರದಲ್ಲಿದೆ. ಬೆಂಗಳೂರಿನಿಂದ ಶುರುವಾದ ಪ್ರಯಾಣ ಹಿಮಾಲಯದವರೆಗೆ ಸಾಗುತ್ತದೆ. ಭಾವನಾತ್ಮಕವಾದ ಈ ಸಿನಿಮಾ ಯುವ ಜನರಿಗೆ ಹೆಚ್ಚು ಮನರಂಜನೆ ನೀಡುತ್ತದೆ. ಹಲವು ರಾಜ್ಯಗಳ ಅನೇಕ ಲೊಕೇಷನ್ಗಳಲ್ಲಿ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ.
ಸೂಪರ್ ಹಿಟ್ ಸೀರಿಯಲ್ ಗಳಾದ ಅಗ್ನಿಸಾಕ್ಷಿ, ನಾಗಿಣಿ, ಕಮಲಿ ನಿರ್ದೇಶಸಿರುವ ಹಯವದನ ಅವರು ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳ್ತಿರುವ ಎಲ್ಲೋ ಜೋಗಪ್ಪ ನಿನ್ನರಮನೆ ಸಿನಿಮಾಗೆ ಶಿವ ಪ್ರಸಾದ್ ಸಂಗೀತ, ನಟರಾಜ್ ಮದ್ದಾಲ ಛಾಯಾಗ್ರಹಣ, ರವಿಚಂದ್ರನ್ ಸಂಕಲನ ಒದಗಿಸಿದ್ದಾರೆ. ಪ್ರಮೋದ್ ಮರವಂತೆ ಮತ್ತು ರವೀಂದ್ರ ಮುದ್ದಿ ಸಾಹಿತ್ಯ ಬರೆದಿದ್ದಾರೆ. ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನರಸಿಂಹ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ‘ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್’ ಮತ್ತು ‘ಕೃಷ್ಣಛಾಯಾ ಚಿತ್ರ’ ಬ್ಯಾನರ್ ಮೂಲಕ ಪವನ್ ಸಿಮಿಕೇರಿ ಹಾಗೂ ಸಿಂಧು ಹಯವದನ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
Be the first to comment