ಐಟಿ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿರುವ ವೃತ್ತಿಜೀವನದ ಕಥೆ ತೆರೆದಿಡುವ ‘ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾ ನವೆಂಬರ್ 24ಕ್ಕೆ ಬಿಡುಗಡೆ ಆಗಲಿದೆ.
ಬೆಂಗಳೂರಿನ ಬ್ಯುಸಿ ಏರಿಯಾಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ಇದೆ. ಈ ಏರಿಯಾದ ಹೆಸರನ್ನು ಕೇಳದವರೇ ಇಲ್ಲ. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರಿಗೂ ಎಲೆಕ್ಟ್ರಾನಿಕ್ ಸಿಟಿ ಪರಿಚಿತವಾಗಿರುತ್ತದೆ. ಈ ಪ್ರಸಿದ್ಧ ಏರಿಯಾದಲ್ಲಿ ಹಲವಾರು ಐಟಿ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಈಗ ‘ಎಲೆಕ್ಟ್ರಾನಿಕ್ ಸಿಟಿ’ ಎಂಬ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ನಿರ್ಮಾಣವಾಗಿ ಬಿಡುಗಡೆ ಆಗುತ್ತಿದೆ.
ಮೂಲತಃ ಐಟಿ ಉದ್ಯೋಗಿ ಆಗಿರುವ ಆರ್. ಚಿಕ್ಕಣ್ಣ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿ ನಿರ್ದೇಶನ ಮಾಡಿದ್ದಾರೆ. ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ ಅನುಭವ ಅವರಿಗೆ ಇದೆ. ಆರ್ಯನ್ ಹರ್ಷ, ದಿಯಾ ಆಶ್ಲೇಶಾ, ರಕ್ಷಿತಾ ಕೆರೆಮನೆ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಈಗಿನ ಬಹುತೇಕ ಎಲ್ಲ ಯುವಕ-ಯುವತಿಯರು ಐಟಿ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಸದಾ ಒತ್ತಡದಲ್ಲಿರುತ್ತಾರೆ. ಐಟಿ ಉದ್ಯೋಗಿಯ ವರ್ಕ್ ಲೈಫ್ ಹೇಗಿರುತ್ತೆ ಎನ್ನುವ ಅಂಶವನ್ನೇ ಇಟ್ಟುಕೊಂಡು ಈ ಸಿನಿಮಾ ತಯಾರಾಗಿದೆ. ಈ ಸಿನಿಮಾದಲ್ಲಿ ತ್ರಿಕೋನ ಪ್ರೇಮಕಥೆ ಕೂಡ ಇದೆ. ಸಿನಿಮಾ ಈಗಾಗಲೇ ಹಲವು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ಗಳಲ್ಲಿ ಪ್ರದರ್ಶನ ಕಂಡಿದೆ. ಒಂದಷ್ಟು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ.
ರಶ್ಮಿ ಶೆಟ್ಟಿ, ಭವ್ಯ ರುತ್ವಿಕ್ ಮುಂತಾದ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಸಿನಿಮಾಗೆ ವಿನು ಮನಸು ಸಂಗೀತ ನೀಡಿದ್ದಾರೆ. ಚಂದ್ರಶೇಖರ್ ಶ್ರೀವಾಸ್ತವ್ ಹಾಡುಗಳನ್ನು ಬರೆದಿದ್ದಾರೆ. ರಾಜ ಶಿವಶಂಕರ್ ಛಾಯಾಗ್ರಹಣ, ಸೌಂದರ್ ರಾಜ್ ಅವರ ಸಂಕಲನ, ಹಂಪಿ ಸುಂದರ್ ಕಲಾ ನಿರ್ದೇಶನ ಈ ಸಿನಿಮಾಗಿದೆ.
Be the first to comment