Ekka Movie Review : ಎಕ್ಕ: ಇದು ಪಕ್ಕಾ ಸೇಡಿನ ಲೆಕ್ಕ!

ಚಿತ್ರ : ಎಕ್ಕ  UA
ನಿರ್ದೇಶಕ : ರೋಹಿತ್ ಪದಕಿ
ನಿರ್ಮಾಪಕ : ಪಿಆರ್ ಕೆ, ಕೆರ್ ಜಿ ಮತ್ತು ಜಯಣ್ಣ ಕಂಬೈನ್ಸ್
ತಾರಾಗಣ : ಯುವರಾಜ್ ಕುಮಾರ್, ಸಂಜನಾ ಆನಂದ್ ಮತ್ತು ಇತರರು…
Dur : 147 Minutes
Released : 18th Jul 2025
Language : Kannada
Ratings : 3.5/5

ಈ ಹೀರೋ ಕೈ ಎತ್ತಿದರೆ ಫೈಟ್ಸು, ಕಾಲೆತ್ತಿದ್ದರೆ ಡಾನ್ಸು ಕಣ್ಣು ಹೊಡೆದರೆ ರೊಮಾನ್ಸು.
ಇದು ಕಥಾ ನಾಯಕ ಮುತ್ತುವಾಗಿ ಯುವ ಸೃಷ್ಟಿಸಿರುವಂಥ ಹವಾ.

ಹಳ್ಳಿ ಹುಡುಗನೊಬ್ಬ ಬೆಂಗಳೂರಿಗೆ ಬಂದು ರೌಡಿಯಾಗುವುದು ಕನ್ನಡದ ಪಾಲಿಗೆ ಖಂಡಿತವಾಗಿ ಹೊಸ ಕಥೆ ಏನಲ್ಲ. ಆದರೂ ಈ ಚಿತ್ರದಲ್ಲಿ ಇರುವುದು ರೌಡಿಸಂ ಮಾತ್ರವೇ ಅಲ್ಲ. ತಾಯಿ ಮಗನ ಸಂಬಂಧ, ಸ್ನೇಹಿತರೆಡಗಿನ ಅನುಬಂಧ, ಕಂದಮ್ಮ ಜತೆಗಿನ ಆನಂದ ಎಲ್ಲವೂ ಇದೆ. ಆದರೆ ಸ್ನೇಹಿತನೊಬ್ಬನ ನಂಬಿಕೆ ದ್ರೋಹ ಎಲ್ಲವನ್ನೂ ಬುಡಮೇಲು ಮಾಡಿಬಿಡುತ್ತದೆ.‌ ಖುದ್ದು ತಾಯಿಯೇ ಮಗುವಂತಿದ್ದ ಮಗ ಮೃಗವಾಗಿದ್ದಾಗಿ ಹೇಳುತ್ತಾಳೆ. ಮೃಗದಂತಾದ ನಾಯಕ ಮುಂದೇನು ಮಾಡುತ್ತಾನೆ ಎನ್ನುವುದೇ ಈ ಚಿತ್ರದ ಕುತೂಹಲಕಾರಿ ಅಂಶ.

ಮುತ್ತುವಾಗಿ ಯುವರಾಜ್ ಮುತ್ತಿನಂಥ ನಟನೆ ನೀಡಿದ್ದಾರೆ.‌ ಬ್ಯಾಂಗಲ್ ಬಂಗಾರಿ ನೃತ್ಯ ನೋಡಿ ಪ್ರೇಕ್ಷಕರು ಹಾಡಿದ್ದಾರೆ! ಮಮತೆ ತುಂಬಿದ ಮಾತೆಯಾಗಿ ಶ್ರುತಿ ಮನದೊಳಗೆ ಸ್ಥಾನ‌ ಪಡೆಯುತ್ತಾರೆ. ನಂದಿನಿಯಾಗಿ ಸಂಜನಾ ಆನಂದ್ ಗೆ ವಿಶೇಷ ಅವಕಾಶಗಳೇನೂ ಇಲ್ಲ. ಆದರೆ ಇರುವ ಅವಕಾಶದಲ್ಲಿ ಸಂಜನಾ ನೀಡಿರುವ ಸಹಜ ನಟನೆ ಮರೆಯುವಂತಿಲ್ಲ.

ಭೂಗತ ಲೋಕವನ್ನು ತೋರಿಸುವ ಚಿತ್ರದಲ್ಲಿ ಸಹಜವಾಗಿಯೇ ಒಬ್ಬರಿಗಿಂತ ಒಬ್ಬರೆನ್ನುವ ಹಾಗೆ ಡಾನ್ ಗಳಿದ್ದಾರೆ. RX ಲಕ್ಷ್ಮಣ, ಕೋಕ,
ಪಳನಿ,ಮಸ್ತಾನ್ ಎನ್ನುವ ವೈವಿಧ್ಯಮಯ ಹೆಸರಿಗೆ ತಕ್ಕಂತೆ ವೈವಿಧ್ಯಮಯ ಪಾತ್ರಗಳು ಕೂಡ ಪರದೆಯಲ್ಲಿ ಕಾಣಿಸುತ್ತವೆ. ಮಸ್ತಾನ್ ಪಾತ್ರದಲ್ಲಿ ಅತುಲ್ ಕುಲಕರ್ಣಿ ಎಂದಿನಂತೆ ಅಮೋಘ ಅಭಿನಯ ನೀಡಿದ್ದಾರೆ. ಖಳ ಪಾತ್ರವಾದರೂ ಅರುಣ್ ಸಾಗರ್ ತಮ್ಮ ಮ್ಯಾನರಿಸಮ್ ನಿಂದಲೇ ನಗಿಸುತ್ತಾರೆ.

ಚಿತ್ರದಲ್ಲಿ ರೋಹಿತ್ ಪದಕಿ ಹೊಸಬರಿಗೆ ಅವಕಾಶ ನೀಡಿದ್ದಾರೆ. ಮಾತ್ರವಲ್ಲ ಸೂರಿ, ಕಾರ್ತಿಕ್ ಗೌಡ ಮೊದಲಾದ ಪರದೆ ಹಿಂದಿರುವವರ ನಟನೆಯ ಪ್ರತಿಭೆಯನ್ನೂ ತೋರಿಸಿದ್ದಾರೆ. ಜನಪ್ರಿಯ ಕಲಾವಿದರಾದ ಸಾಧುಕೋಕಿಲ, ಹರಿಣಿ ಮೊದಲಾದವರು ಉಪ್ಪಿನ ಕಾಯಿಯಂತೆ ತಮ್ಮ ಪೋಷಕ ನಟನೆಯಿಂದ ಸಿನಿಮೃಷ್ಟಾನ್ನವನ್ನು ಸಂಪೂರ್ಣಗೊಳಿಸಿದ್ದಾರೆ. ಚಿತ್ರದ ಸಂಗೀತ, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಎಲ್ಲವೂ ಕಥೆಗೆ ಪೂರಕವಾಗಿಯೇ ಮೂಡಿ ಬಂದಿದೆ. ಯುವರಾಜ್ ಎಕ್ಕ ಚಿತ್ರ ಪಕ್ಕಾ ಬ್ಲಾಕ್ ಬಸ್ಟರ್ ಆಗುವುದರಲ್ಲಿ ಸಂದೇಹವಿಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!