ಚಿತ್ರೀಕರಣ ಆರಂಭಿಸಿದ “ಎಕ್ಕ”

ಯುವ ರಾಜ್‌ ಕುಮಾರ್‌ ಅವರ ಬಹು ನಿರೀಕ್ಷಿತ ಚಿತ್ರ “ಎಕ್ಕ”  ತನ್ನ  ಮುಹೂರ್ತವನ್ನು ಶ್ರೀ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ನೆರವೇರಿಸಿ ಚಿತ್ರೀಕರಣವನ್ನು ಆರಂಭಿಸಿದೆ.

ವಿಜಯ್‌ ಕಿರಗಂದೂರ್‌ ಅವರ ಪತ್ನಿ  ಶೈಲಜಾ ವಿಜಯ್‌ ಕ್ಲಾಪ್‌ ಮಾಡುವ ಮೂಲಕ “ಎಕ್ಕ” ಚಿತ್ರಕ್ಕೆ ನಾಂದಿ ಹಾಡಲಾಯಿತು. ಮೊದಲ ಶಾಟ್‌ ನ್ನು ನಟರಾಕ್ಷಸ ಡಾಲಿ ಧನಂಜಯ್‌ ನಿರ್ದೇಶಿಸಿದ್ದು, ನಿರ್ಮಾಪಕ ಕಾರ್ತಿಕ ಗೌಡ ಅವರ ತಾಯಿ  ವಿಜಯಲಕ್ಷ್ಮೀ ರಾಮಕೃಷ್ಣ ಕ್ಯಾಮೆರಾ ಬಟನ್‌ ಆನ್‌ ಮಾಡುವ ಮೂಲಕ ಚಾಲನೆ ನೀಡಿದರು.

ಪಿ.ಆರ್.ಕೆ ಪ್ರೊಡಕ್ಷನ್ಸ್‌, ಜಯಣ್ಣ ಫಿಲಂಸ್, ಕೆ.ಆರ್.ಜಿ.ಸ್ಟುಡಿಯೋಸ್‌ ಸಹಯೋಗದಲ್ಲಿ ಮೂಡಿಬರುತ್ತಿರುವ   “ಎಕ್ಕ” ಚಿತ್ರದ ಚಿತ್ರೀಕರಣ ಕಾಶ್ಮೀರ, ಬೆಂಗಳೂರು, ಮೈಸೂರು, ದೆಹಲಿ, ಕೋಲ್ಕತ್ತಾ, ಮುಂಬೈ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಚಿತ್ರೀಕರಣ ನಡೆಯುವುದಾಗಿ ಚಿತ್ರತಂಡ  ತಿಳಿಸಿದೆ.

ನಿರ್ದೇಶಕ ರೋಹಿತ್‌ ಪದಕಿ ಮಾತನಾಡಿ, “ಎಕ್ಕ ಒಂದು ಮೆಗಾ ಚಿತ್ರವಾಗಿದೆ. ಚಿತ್ರದ ಎಲ್ಲ ನಿರ್ಮಾಪಕರು, ಕನ್ನಡ ಜನರು, ಯುವ ರಾಜ್‌ ಕುಮಾರ್‌ ಮತ್ತು ಅವರ ಅಭಿಮಾನಿಗಳ ಎಲ್ಲರ ನಂಬಿಕೆಯನ್ನು ಈ ಚಿತ್ರ ಉಳಿಸಲಿದೆ. ಜನರ ಮೇಲೆ ಆಳವಾದ ಭಾವನಾತ್ಮಕ ಪ್ರಭಾವ ಬೀರಲಿದೆ” ಎಂದು ತಿಳಿಸಿದರು.

ನಾಯಕ ನಟ ಯುವ ರಾಜ್‌ ಕುಮಾರ್‌ ಮಾತನಾಡಿ, “ತಾಯಿ ಆಶಿರ್ವಾದದೊಂದಿಗೆ, ಅಪ್ಪು ಚಿಕ್ಕಪ್ಪನ ಆಶಿರ್ವಾದದೊಂದಿಗೆ  “ಎಕ್ಕ” ಚಿತ್ರವನ್ನು ಆರಂಭಿಸಿದ್ದೇವೆ. ಮೂರು ಹೆಸರಾಂತ ನಿರ್ಮಾಣ ಸಂಸ್ಥೆಗಳೊಡನೆ, ರೋಹಿತ್ ಪದಕಿ ಅಂತಹ ದೊಡ್ಡ ನಿರ್ದೇಶಕರೊಡನೆ ಕೆಲಸ ಮಾಡುತ್ತಿರುವುದು ನನಗೆ ತುಂಬಾ ಖುಷಿ ಇದೆ” ಎಂದರು.

ನಾಯಕಿ ಸಂಪದಾ ಮಾತನಾಡಿ, “ಎಕ್ಕ ಚಿತ್ರದ ಆರಂಭ  ಮಂಗಳಕರವಾಗಿ ನೆರವೇರಿರುವುದು ನನಗೆ  ಸಂತೋಷವನ್ನುಂಟು ಮಾಡಿದೆ. ಚಿತ್ರೀಕರಣವನ್ನು ನಾನು ಕಾತುರವಾಗಿ ಎದುರು ನೋಡುತ್ತಿದೇನೆ” ಎಂದು ತಿಳಿಸಿದರು.

ಒಬ್ಬ ಮನುಷ್ಯನು ಭೂಗತ ಲೋಕಕ್ಕೆ ತುತ್ತಾದಾಗ ಆತನಿಗೆ ಆಗುವ ಅನುಭವಗಳನ್ನು ಹೇಳುವ ಕಥೆಯೇ “ಎಕ್ಕ”. ‌ ಚಿತ್ರದಲ್ಲಿ ಅತ್ತುಲ್‌ ಕುಲಕರ್ಣೀ, ಶ್ರುತಿ ಕೃಷ್ಣ, ರಾಹುಲ್‌ ದೇವ್‌ ಶೆಟ್ಟಿ ಮುಂತಾದವರು ನಟಿಸಲಿದ್ದಾರೆ. ಚಿತ್ರಿಕಥೆ ರೋಹಿತ್‌ ಪದಕಿ ಮತ್ತು ವಿಕ್ರಮ್‌ ಹತ್ವಾರ್‌,    ಸಂಗೀತ ಚರಣ್‌ ರಾಜ್‌,  ಸಾಹಿತ್ಯವನ್ನು ವಿ.ನಾಗೇಂದ್ರ ಪ್ರಸಾದ್‌, ನಾಗಾರ್ಜುನ ಶರ್ಮ, ನಟರಾಕ್ಷಸ ಡಾಲಿ ಧನಂಜಯ, ರೋಹಿತ್‌ ಪದಕಿ ರಚಿಸಲಿದ್ದಾರೆ.

ಸತ್ಯ ಹೆಗಡೆ ಮುಖ್ಯ ಛಾಯಾಗ್ರಾಹಕರಾಗಿದ್ದು, ದೀಪು ಎಸ್‌ ಕುಮಾರ್‌ ಸಂಕಲನ, ವಿಶ್ವಾಸ್‌ ಕಶ್ಯಪ್‌ ಪ್ರೊಡಕ್ಷನ್‌ ವಿನ್ಯಾಸವನ್ನು ಮಾಡಲಿದ್ದಾರೆ.   ಫೈಟ್ಸ್‌ ಗಳನ್ನು ಅರ್ಜುನ್‌ ರಾಜ್‌ ಮತ್ತು ಚೇತನ್‌ ಡಿಸೌಜಾ಼ ನಿರ್ದೇಶಿಸಲಿದ್ದಾರೆ. ಚಿತ್ರ  ಜೂನ್ 6 , 2025 ರಂದು ತೆರೆ ಕಾಣುವುದಾಗಿ ಚಿತ್ರತಂಡ ತಿಳಿಸಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!