ನಿರ್ದೇಶಕ ಪ್ರೇಮ್ ನಿರ್ದೇಶನದ ಹೊಸ ಚಿತ್ರ `ಏಕ್ ಲವ್ ಯಾ’. ರಕ್ಷಿತಾ ಪ್ರೇಮ್ ಅವರ ಸಹೋದರ ಅಭಿಷೇಕ್ ಈ ಚಿತ್ರದ ಮೂಲಕ ರಾಣಾ ಎಂಬ ಹೆಸರಿನೊಂದಿಗೆ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ.
ಕಳೆದ ಶನಿವಾರ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ನೆರವೇರಿಸಿ `ಏಕ್ ಲವ್ ಯಾ’ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಈ ಸರಳ ಮುಹೂರ್ತ ಸಮಾರಂಭದಲ್ಲಿ ನಿರ್ದೇಶಕ ಪ್ರೇಮ್ ತಮ್ಮ ಭಾವಮೈದುನ ಅಭಿಷೇಕ್ ನಟನೆಯ ಮೊದಲ ದೃಶ್ಯವನ್ನು ಚಿತ್ರೀಕರಿಸಿಕೊಂಡರು. ಇದೇ ತಿಂಗಳ ಇಪ್ಪತ್ತರಿಂದ `ಏಕ್ ಲವ್ ಯಾ’ ಚಿತ್ರದ ಚಿತ್ರೀಕರಣವನ್ನು ಮುಂದುವರೆಸಿದ್ದಾರೆ. ಈ ಸಿನಿಮಾ ಆರಂಭಗೊಂದ ಶುಭ ಸಂದರ್ಭದಲ್ಲಿ ನಟಿ ರಕ್ಷಿತಾ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ `ನಿಮ್ಮ ಆಶೀರ್ವಾದ ನನ್ನ ಸಹೋದರ ಅಭಿಷೇಕ್ ಮೇಲೆ ಇರಲಿ’ ಎಂದು ವಿನಂತಿಸಿಕೊಂಡಿದ್ದಾರೆ.
ರಾಣಾ (ಅಭಿಷೇಕ್) ಇಂಜಿನಿಯರಿಂಗ್ ಮುಗಿಸಿ ನ್ಯೂಯಾರ್ಕ್‍ನ ಲೀ ಸ್ಟ್ರಾಸ್ಬೆರ್ಗ್ ಥಿಯೇಟರಿನಲ್ಲಿ ಅಭಿನಯ ತರಬೇತಿ ಪಡೆದು, ನಂತರ ನಿರ್ದೇಶಕ ಪ್ರೇಮ್ ಅವರ `ದಿ ವಿಲನ್’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿಯೂ ಕಾರ್ಯ ನಿರ್ವಹಿಸಿದ್ದರು.
ರಕ್ಷಿತಾ ಫಿಲ್ಮ್ ಫ್ಯಾಕ್ಟರಿಯಲ್ಲಿ ನಿರ್ಮಾಣವಾಗುತ್ತಿರುವ ಏಕ್ ಲವ್ ಯಾ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ ಜವಾಬ್ದಾರಿ ಹೊತ್ತಿದ್ದಾರೆ. ಶ್ರೀನಿವಾಸ್ ಪಿ ಬಾಬು ಸಂಕಲನ ಮಾಡಲಿದ್ದಾರೆ.
Pingback: go right here