ಸಿತೇಶ್ ಸಿ ಗೋವಿಂದ್ ನಿರ್ದೇಶನದ “ಇದು ಎಂಥಾ ಲೋಕವಯ್ಯ” ಕನ್ನಡ ಚಿತ್ರ ಆಗಸ್ಟ್ 9ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಲಿದೆ.
ಕಡ್ಲೆಕಾಯಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಿನಿಮಾವನ್ನು ಖ್ಯಾತ ಮಲಯಾಳಂ ನಿರ್ದೇಶಕ ಜಿಯೋ ಬೇಬಿಯವರು ಅರ್ಪಿಸುತ್ತಿದ್ದಾರೆ.
“ಇದು ಎಂಥಾ ಲೋಕವಯ್ಯ” ಒಂದು ಸಾಮಾಜಿಕ ವಿಡಂಬನಾತ್ಮಕ ಚಲನಚಿತ್ರವಾಗಿದ್ದು, ಇದು ಕರ್ನಾಟಕ ಮತ್ತು ಕೇರಳ ಗಡಿಯಲ್ಲಿನ ಹಳ್ಳಿಗಳಲ್ಲಿ ನಡೆಯುವ ಕತೆಯಾಗಿದೆ. ಚಲನಚಿತ್ರವು ಎರಡು ದಿನಗಳಲ್ಲಿ ನಡೆಯುವ ಘಟನೆಗಳೊಂದಿಗೆ ತೆರೆದುಕೊಳ್ಳುತ್ತದೆ. ಇದು ಗಡಿ ಪ್ರದೇಶದ ವೈವಿಧ್ಯಮಯ ಸಾಂಸ್ಕೃತಿಕ ಚಿತ್ರಣವನ್ನು ಕೂಡಾ ಪ್ರತಿಬಿಂಬಿಸುತ್ತದೆ. ಸಿತೇಶ್ ಸಿ ಗೋವಿಂದ್ ಅವರು ಕರ್ನಾಟಕ-ಕೇರಳ ಗಡಿಯ ಸಾಂಸ್ಕೃತಿಕ ಸತ್ವ ಮತ್ತು ಅಲ್ಲಿನ ಜನರ ವಿಶಿಷ್ಟ ರೀತಿಯ ನಂಬಿಕೆಗಳನ್ನು ಹೊರತರುವ ಒಳನೋಟವುಳ್ಳ ಸಾಮಾಜಿಕ ವ್ಯಾಖ್ಯಾನವನ್ನು ತಿಳಿಯಾದ ಹಾಸ್ಯದೊಂದಿಗೆ ಸಮತೋಲನಗೊಳಿಸಿ ಕಥೆಯನ್ನು ರಚಿಸಿದ್ದಾರೆ.
ಚಿತ್ರದಲ್ಲಿ ಕನ್ನಡ, ಮಲಯಾಳಂ, ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳ ವಿಶಿಷ್ಟಪೂರ್ಣ ಸಮ್ಮೇಳನವಾಗಿದೆ. ಚಿತ್ರದ ಹಾಡುಗಳು ಸಹ ಮಿಶ್ರ ಭಾಷಾ ಛಾಯೆಗಳನ್ನು ಹೊಂದಿದ್ದು, ಚಿತ್ರದ ಮೆರುಗು ಮತ್ತು ಆಕರ್ಷಣೆಯನ್ನು ಹೆಚ್ಚಿಸಿದೆ.
ಚಿತ್ರ ಸ್ಥಳೀಯ ಮೂಢನಂಬಿಕೆಗಳಿಂದ ಪ್ರಭಾವಿತವಾದ ಘಟನೆಗಳ ಸರಣಿಯನ್ನು ಎತ್ತಿತೋರಿಸುತ್ತದೆ ಮತ್ತು ಕೆಲವು ಅನಿರೀಕ್ಷಿತ ಘಟನೆಗಳಿಗೆ ಕಾರಣವಾಗುತ್ತದೆ.
Be the first to comment