ನವಿಲಾಗಲು ಹೊರಟ ಕೆಂಭೂತ ಈತ..!

 

ಕೆಲವರಿಗೆ ತಮ್ಮ ಕೆಲಸಕ್ಕೆ ಸಂಭಾವನೆ ಪಡೆಯುವುದರ ಜತೆಗೆ ಹೆಚ್ಚು ಪ್ರಚಾರ ಬೇಕು ಅಂತ ಇರುತ್ತೆ. ಸಿನಿಮಾರಂಗದಲ್ಲಿ ಪರದೆಯ ಮೇಲೆ ಕಾಣಿಸಿಕೊಳ್ಳುವವರಿಗೆ ಇಂಥ ಬಯಕೆಗಳು ಸಾಮಾನ್ಯ. ಯಾಕೆಂದರೆ ಅವರು ಕಲಾವಿದರಾಗಲು ಅದೂ ಒಂದು ಪ್ರಮುಖ ಕಾರಣವಾಗಿರುತ್ತದೆ. ಆದರೆ ತೆರೆಯ ಹಿಂದಿನ ವ್ಯಕ್ತಿಗಳಿಗೆ ಇಂಥದೊಂದು ಆಸೆ ವಕ್ಕರಿಸಿಕೊಂಡರೆ ಆ ಮೇಲಿನದ್ದು ಅಷ್ಟೇ! ಸದ್ಯಕ್ಕೆ ಅಂಥ ಪ್ರಚಾರ ಪ್ರಿಯತೆಯ ಬೆನ್ನು ಬಿದ್ದಂಥ ವ್ಯಕ್ತಿ ಕೆಂಪರಾಜು ಎನ್ನುವ ಸಂಕಲನಕಾರ!

ಮೊನ್ನೆ ಗುರುವಾರ ಐದು ಅಡಿ ಏಳು ಅಂಗುಲ ಎನ್ನುವ ಸಿನಿಮಾ ಬಿಡುಗಡೆಯಾಯಿತು. ಗಾಂಧಿನಗರದ ತ್ರಿವೇಣಿ ಚಿತ್ರಮಂದಿರದಲ್ಲಿ ಮಧ್ಯಾಹ್ನದ ಪ್ರದರ್ಶನಕ್ಕೆ ತಯಾರಿ ನಡೆದಿತ್ತು. ಅದಾಗಲೇ ಕೊರೊನ ವೈರಸ್ ಕಾಟದಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆಯಲ್ಲಿ ಕೊರತೆ ಎದ್ದು ಕಾಣುತ್ತಿತ್ತು. ಇದೇ ಕಾರಣವೊಡ್ಡಿ ಚಿತ್ರಮಂದಿರಗಳನ್ನು ಮುಚ್ಚಲಾಗುವುದೆನ್ನುವ ಬಗೆಗಿನ ಸುದ್ದಿಯ ಮುನ್ಸೂಚನೆ ಮಾಧ್ಯಮಗಳಿಗೆ ಲಭಿಸಿತ್ತು. ಹಾಗಾಗಿ ಖಾಸಗಿ ವಾಹಿನಿಯ ವರದಿಗಾರನೋರ್ವ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದ. ಚಿತ್ರ ನೋಡಲು ಬಂದಿದ್ದ ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರಲ್ಲಿ “ಕೊರೊನ ವೈರಸ್ ಭಯದಿಂದ ಪ್ರೇಕ್ಷಕರು ಕಡಿಮೆಯಾಗಿದ್ದಾರೆ ಎಂದು ನಿಮಗೆ ಅನಿಸಿದೆಯೇ? ನಿಮ್ಮ ಅಭಿಪ್ರಾಯ ಏನು?” ಎನ್ನುವ ಸಹಜ ಪ್ರಶ್ನೆಯನ್ನು ಕೇಳಿದ್ದಾನೆ. ಆದರೆ ಅದೆಲ್ಲಿದ್ದನೋ ಈ ಕೆಂಪರಾಜ ಜಿಗಿದೆದ್ದು ಬಂದು ಕ್ಯಾಮೆರ ಮುಂದೆ ನಿಂತುಕೊಂಡ. “ಹಲೋ ಸ್ವಾಮಿ, ಜನ ಬರ್ತಿದ್ದಾರೆ. ನೀವು ಕೊರೊ ಹೆಸರು ಹೇಳಿ ಜನ ಬರದ ಹಾಗೆ ಮಾಡದಿದ್ದರೆ ಸರಿ” ಎಂದು ಬಿಟ್ಟ. ಅವನತ್ತ ಅಚ್ಚರಿಯಿಂದ ನೋಡಿದ ವರದಿಗಾರ “ನೀವು ಯಾರು” ಎಂದು ವಿಚಾರಿಸಿದ. ಅದಕ್ಕೆ ಸಿಡಿಮಿಡಿಗೊಂಡ ಕೆಂಪರಾಜು, “ನೋಡಿ, ನಾನು ಚಿತ್ರೋದ್ಯಮಕ್ಕೆ ಸೀನಿಯರ್ ಇದ್ದೀನಿ. ನನ್ನ ಬಗ್ಗೆಯೇ ಗೊತ್ತಿಲ್ಲ ಅಂತೀರಲ್ಲ? ನೀವೆಲ್ಲ ಎಂಥ ಮಾಧ್ಯಮದವರು?” ಎಂದು ಧ್ವನಿಯೆತ್ತಿಯೇ ಬಿಟ್ಟ. ತಕ್ಷಣ ವರದಿಗಾರ “ಎಲ್ಲರಿಗೆ ಎಲ್ಲರೂ ಪರಿಚಯ ಇರಬೇಕು ಎಂದೇನೂ ನಿಯಮ ಇಲ್ಲ. ಉದಾಹರಣೆಗೆ ಮಾಧ್ಯಮ ಲೋಕದಲ್ಲಿ ನಾನು ಕೂಡ ಸೀನಿಯರ್ರೇ. ನಿಮಗೆ ನನ್ನ ಹೆಸರು ಗೊತ್ತೇನ್ರಿ? ಎಷ್ಟೇ ಸೀನಿಯಾರಿಟಿ ಇದ್ದರೂ, ಮಾತನಾಡಬೇಕಿದ್ದರೆ ಮೊದಲು ಪರಿಚಯಿಸಿಕೊಳ್ಳುವ ಒಂದು ಸಂಸ್ಕೃತಿ, ಸಂಸ್ಕಾರ ಎನ್ನುವುದು ಇರುತ್ತದೆ‌. ಅದನ್ನು ಮೊದಲು ಕಲಿತ್ಕೊಳ್ಳಿ ಎಂದು ಬಿಟ್ಟ! ಕೆಂಪರಾಜು ಮುಖ ಕೆಂಪು ಮಾಡ್ಕೊಂಡು ಜಾಗ ಖಾಲಿ ಮಾಡಿದ.

ಸಂಕಲನಕಾರ ಸಂಕಲನದಲ್ಲಿ ತನ್ನ ಪ್ರತಿಭೆಯನ್ನು ತೋರಿಸಬೇಕೇ ಹೊರತು, ಮಾಧ್ಯಮಗಳ ಮೇಲೆ ಎಗ ರಾಡುವುದರಲ್ಲಿ ಅಲ್ಲ. ಮಣಿರತ್ನಂ ಅವರ ಬಳಿ ಕಾರ್ಯನಿರ್ವಹಿಸಿದ ಸುರೇಶ್ ಅರಸ್ ಅವರಂಥ ದಿಗ್ಗಜ ಸಂಕಲನಕಾರರನ್ನು ನಾವು ಕಂಡಿದ್ದೇವೆ. ಪ್ರಶಸ್ತಿ ಜನಪ್ರಿಯತೆಗಳ ತುದಿಯಲ್ಲಿದ್ದರೂ ಇಂದಿಗೂ ಸರಳ, ವಿರಳ ವಿನಯವಂತಿಕೆಯ ಅದ್ಭುತ ವ್ಯಕ್ತಿಯಾಗಿ ಸುರೇಶ್ ಅರಸು ಕಾಣಿಸಿಕೊಳ್ಳುತ್ತಾರೆ. ಅವರು “ನಾನ್ಯಾರು ಗೊತ್ತಾ” ಎಂದು ಅಬ್ಬರಿಸಿರುವುದನ್ನು ಇದುವರೆಗೆ ಯಾವ ಮಾಧ್ಯಮಗಳೂ ಕಂಡಿಲ್ಲ. ಕೆಲಸ ಹಿನ್ನೆಲೆಯಲ್ಲಿ ಮಾಡಲಿ, ಅಥವಾ ಮುನ್ನೆಲೆಯಲ್ಲೇ ಮಾಡಲಿ..‌ ಪ್ರತಿಭೆ ಮಾತನಾಡಬೇಕೇ ಹೊರತು ಅಹಂಕಾರವಲ್ಲ. ಇದನ್ನು ಮೊದಲು ಕೆಂಪನಂಥವರು ಕಲಿಯಬೇಕಿದೆ. ಕೆಂಪರಾಜು ತನ್ನ ಅಹಂಕಾರವನ್ನು ಸ್ವಲ್ಪ ಎಡಿಟ್ ಮಾಡಿ ಬಿಸಾಕುವುದು ಒಳಿತು.

This Article Has 1 Comment
  1. Pingback: see here now

Leave a Reply

Your email address will not be published. Required fields are marked *

Translate »
error: Content is protected !!