ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಿರ್ಮಾಪಕ, ನಿರ್ದೇಶಕ ಆರ್ ಸಾಗರ್ ಕತೆ, ಚಿತ್ರಕತೆ , ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರ ‘ಪ್ರತಿಬಿಂಬ’ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಪ್ರದೀಪ್ ಸೋನ್ಸ್ ನಿರ್ಮಿಸಿರುವ ಈ ಚಿತ್ರಕ್ಕೆ ಮಂಡ್ಯ ಅರುಣ್ ಛಾಯಾಗ್ರಾಹಕರು. ಗೋಪಿ ಕಲಾಕಾರ್ ಸಂಗೀತ ನಿಡಿದ್ದಾರೆ. ಚಿತ್ರದ ಬಗ್ಗೆ ನಿರ್ದೇಶಕ ಆರ್ ಸಾಗರ್ ಸಾಗರ್ ಅವರೊಂದಿಗೆ ಬಿ ಸಿನಿಮಾಸ್ ನಡೆಸಿರುವ ವಿಶೇಷ ಮಾತುಕತೆ ಇಲ್ಲಿದೆ.
‘ಪ್ರತಿಬಿಂಬ’ ಚಿತ್ರದ ವಿಶೇಷತೆಗಳೇನು?
ಇದು ಕಣ್ಣುಗಳ ಕತೆ ಹೇಳುವ ಚಿತ್ರ. ಹಾಗಾಗಿಯೇ ಚಿತ್ರಕ್ಕೆ ‘ಪ್ರತಿಬಿಂಬ’ ಎನ್ನುವ ಹೆಸರಿಡಲಾಗಿದೆ. ನೇತ್ರದಾನ, ಅಂಗದಾನದ ಬಗ್ಗೆ ಸಾಮಾಜಿಕ ಸಂದೇಶ ಸಾರುವ ಈ ಸಿನಿಮಾದಲ್ಲಿ ಸಾಂಸಾರಿಕ ಕತೆ ಇದೆ. ದಾನ ಮತ್ತೊಬ್ಬರ ಜೀವಕ್ಕೆ ಹೇಗೆ ಬೆಳಕಾಗಬಹುದು ಎನ್ನುವುದನ್ನು ಸಿನಿಮಾ ತೋರಿಸಲಿದೆ. ಚಿತ್ರದಲ್ಲಿ ಒಬ್ಬರು ಒಳ್ಳೆಯ ಸ್ಕೂಲ್ ಮೇಷ್ಟ್ರು ಇರುತ್ತಾರೆ. ಆದರೆ ಅವರ ಮಗನಿಗೆ ಕಣ್ಣಿರುವುದಿಲ್ಲ. ವೈರಲ್ ಫಿವರ್ ಕಾರಣದಿಂದಾಗಿ ಕಣ್ಣು ಕಳೆದುಕೊಂಡಿರುತ್ತಾನೆ. ಮೇಷ್ಟ್ರು ಅದೇ ನೋವಿನಲ್ಲಿದ್ದುಕೊಂಡು ಮಗನಿಗೆ ಕಣ್ಣು ಕೊಡಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಅಷ್ಟರಲ್ಲಿ ಅವರನ್ನು ಬೇರೆ ಊರಿಗೆ ವರ್ಗಾವಣೆ ಮಾಡಲಾಗುತ್ತದೆ. ಅಲ್ಲಿನ ಒಂದಷ್ಟು ಘಟನೆಗಳ ಬಳಿಕ ಅವರ ಮಗನಿಗೆ ಕಣ್ಣು ಬರುತ್ತೆ. ಆ ಕಣ್ಣು ಬರಲು ಕಾರಣವಾಗುವ ಘಟನೆಯೇ ಚಿತ್ರದ ಹೈಲೈಟ್.
ಚಿತ್ರದ ತಾರಾಗಣದ ಬಗ್ಗೆ ಹೇಳಿ
ಈ ಸಿನಿಮಾದ ತಾರಾಗಣದ ಬಗ್ಗೆ ಹೇಳುವ ಮೊದಲು ನಿರ್ಮಾಪಕರ ಬಗ್ಗೆ ಹೇಳಲೇಬೇಕು. ಯಾಕೆಂದರೆ ನಿರ್ಮಾಪಕ ಪ್ರದೀಪ್ ಸೋನ್ಸ್ ಅವರೇ ಚಿತ್ರದಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆ. ವಾಸ್ತವದಲ್ಲಿ ನಮ್ಮಿಬ್ಬರದು ಹಲವಾರು ವರ್ಷಗಳ ಸ್ನೇಹ. ವೃತ್ತಿಯಲ್ಲಿ ಅವರು ಮೆಕಾನಿಕಲ್ ಇಂಜಿನಿಯರ್. ಆದರೆ ನಾವಿಬ್ಬರೂ ಸೇರಿ ಕನ್ನಡ ಸಿನಿಮಾಗಳನ್ನು ತಮಿಳಿಗೆ ಡಬ್ ಮಾಡಿ ಬಿಡುಗಡೆಗೊಳಿಸಲು ನಾವು ಒಂದು ಸಂಸ್ಥೆ ಶುರು ಮಾಡಿದ್ದೆವು. ಅಷ್ಟರಲ್ಲಿ ಕೋವಿಡ್ ಬಂತು. ಆ ಹೊತ್ತಿಗೆ ನಾನೇ ಒಂದು ಕತೆ ಮಾಡಿದ್ದಾಗಿ ಅವರಿಗೆ ಹೇಳಿದಾಗ ಖುಷಿಯಾದರು. ಚಿತ್ರದಲ್ಲಿ ಮೇಷ್ಟ್ರ ಪಾತ್ರವನ್ನು ಅವರಲ್ಲಿ ಮಾಡಲು ಹೇಳಿದಾಗ ಒಪ್ಪಿಕೊಂಡರು. ಜೊತೆಗೆ ಚಿತ್ರದ ನಿರ್ಮಾಣಕ್ಕೂ ಅವರೇ ಮುಂದಾದರು. ಅವರ ಜೋಡಿಯಾಗಿ ಶೋಭಾರಾಣಿ ಮಾಡಿದ್ದಾರೆ. ಸೆಕೆಂಡ್ ಹೀರೋ ಆಗಿ ಯುವನಟ ಹರ್ಷ್ ನಟಿಸಿದ್ದಾರೆ. ಅವರು ಲಲಿತಾ ಜ್ಯುವೆಲ್ಲರಿ, ಅರುಣ್ ಐಸ್ಕ್ರೀಂ, ವಿಕೆಸಿ ಚಪ್ಪಲಿ ಜಾಹೀರಾತುಗಳ ಮೂಲಕ ಗುರುತಿಸಿಕೊಂಡವರು. ಅವರಿಗೆ ಜೋಡಿಯಾಗಿ ಮಹಾಲಕ್ಷ್ಮಿ ನಟಿಸಿದ್ದಾರೆ. ಮೇಷ್ಟ್ರ ಕಣ್ಣಿಲ್ಲದ ಮಗನಾಗಿ ಹರ್ಷಿಕ್ ಅದ್ಭುತವಾಗಿ ನಟಿಸಿದ್ದಾರೆ. ಅವರು ಚಿತ್ರದ ಕೊರಿಯಾಗ್ರಫರ್ ಕೂಡ ಹೌದು. ಶ್ರೀರಾಮ್ ಎನ್ನುವವರು ಪಟೇಲ್ ಎನ್ನುವ ಪಾತ್ರ ಮಾಡಿದ್ದಾರೆ. ಉಳಿದಂತೆ ಒಂದಷ್ಟು ಪೋಷಕ ಪಾತ್ರಗಳಿವೆ.
ನಿರ್ದೇಶಕರಾಗಿ ನಿಮ್ಮ ಅನುಭವ ಏನು?
ನಾನು ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ನಿರ್ದೇಶಕ, ನಿರ್ಮಾಪಕನಾಗಿದ್ದೇನೆ. ಕನ್ನಡದಲ್ಲಿ ಮಾರುತಿ ಶಿವರಾಂ, ಹ.ಸೂ ರಾಜೇಶೇಖರ್, ತಮಿಳಲ್ಲಿ ಪ್ರವೀಣ್ ಗಾಂಧಿ, ತೆಲುಗಲ್ಲಿ ರಾಜೇಂದ್ರ ಕುಮಾರ್ ಮೊದಲಾದ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದೇನೆ. ಮಲಯಾಳಂನಲ್ಲಿ ಭರತನ್ ಸರ್ ಅವರು `ತಾಳಂ ಪೂ’ ಸಿನಿಮಾ ಮಾಡುವಾಗ ಅವರ ತಂಡದಲ್ಲಿದ್ದೆ. ಹಾಗೆ ಪಡೆದ ಒಟ್ಟು ಅನುಭವದಿಂದ ಈ ಚಿತ್ರ ಮಾಡಿದ್ದೇನೆ. ಈ ಹಿಂದೆ `ಭಯಾನಕ’ ಎನ್ನುವ ಚಿತ್ರವನ್ನು ಮಾಡಿದ್ದೇನೆ. ಪ್ರಸ್ತುತ ಪ್ರತಿಬಿಂಬ ಚಿತ್ರದಲ್ಲಿ ಒಂದು ವೈದ್ಯರ ಪಾತ್ರವನ್ನು ಕೂಡ ನಾನೇ ನಿಭಾಯಿಸಿದ್ದೇನೆ. ಕತೆಗೆ ಸಂಬಂಧಿಸಿದ ಹಾಗೆ ಮೂರು ಅದ್ಭುತವಾದ ಹಾಡುಗಳನ್ನು ಬಳಸಿಕೊಂಡಿದ್ದೇವೆ. ಫೈಟ್ಸ್ ಇಲ್ಲ. ಚಿಕ್ಕಮಗಳೂರು, ಮೂಡಿಗೆರೆ, ಮೂಡುಬಿದ್ರೆಗಳಲ್ಲಿ ಚಿತ್ರೀಕರಿಸಲಾಗಿದೆ. ಒಟ್ಟು ಇದುವರೆಗಿನ ಅನುಭವ ಚೆನ್ನಾಗಿದೆ. ಮುಂದೆ ನಮ್ಮ ಚಿತ್ರದ ಮೂಲಕ ಅದರ ಸಂದೇಶ ಲಕ್ಷಾಂತರ ಮಂದಿಗೆ ತಲುಪಿ, ಅದರಲ್ಲಿ ಇಬ್ಬರಾದರೂ ಅಂಗದಾನ, ನೇತ್ರದಾನ ಮಾಡಿದದರೆ ಅದೇ ಖುಷಿ.
Be the first to comment