ಒಂದಷ್ಟು ದಿನಗಳಿಂದ ‘ದ್ವಾರಕೀಶ್ ಇನ್ನಿಲ್ಲ’ ಅನ್ನುವ ಸುದ್ದಿ ಹರಿದಾಡುತ್ತಿದೆ. ಖುದ್ದು ದ್ವಾರಕೀಶ್ ಅವರೇ ತಾವು ಇನ್ನೂ ಬದುಕಿರುವುದಕ್ಕೆ ಒಂದು ವಿಡಿಯೋ ಮಾಡಿ ಕಳಿಸಿದ್ದೂ ಆಯ್ತು. ಹೀಗಿದ್ದರೂ.. ಒಂದಷ್ಟು ಸೋಶಿಯಲ್ ಮಿಡಿಯಾದ ಹುಚ್ಚು ಅಡರಿಕೊಂಡಿರುವ ವೇಸ್ಟ್ ಬಾಡಿಗಳು ಇನ್ನೂ ದ್ವಾರಕೀಶ್ ಸಾವಿಗಾಗಿ ದುಃಖ ವ್ಯಕ್ತ ಪಡಿಸುತ್ತಿದ್ದಾರೆ! ಆದರೆ ಆಯಸ್ಸು ಗಟ್ಟಿಯಾಗಿರುವ ‘ಕರ್ನಾಟಕದ ಕುಳ್ಳ’, ‘ಆಯುಷ್ಮಾನ್‍ಭವ’ ಎಂಬ ಚಿತ್ರವನ್ನು ಸದ್ದಿಲ್ಲದೆ ಮುಗಿಸಿದ್ದಾರೆ.
ಹೌದು, ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಬಿ.ಎಸ್.ದ್ವಾರಕೀಶ್ ಹಾಗೂ ಯೋಗೀಶ್ ದ್ವಾರಕೀಶ್ ಅವರು ನಿರ್ಮಿಸುತ್ತಿರುವ, ಡಾ||ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಚಿತ್ರಕ್ಕೆ ‘ಆಯುಷ್ಮಾನ್‍ಭವ’ ಎಂದು ಶೀರ್ಷಿಕೆ ಇಡಲಾಗಿದೆ.
ಪಿ.ವಾಸು ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಗೌರಿಬಿದನೂರು, ಅಲೇಪಿ, ಚಾಲ್‍ಕುಡಿ, ಮಂಗಳೂರು, ಮಡಿಕೇರಿ, ಹೈದರಾಬಾದ್ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ನಿರ್ದೇಶಕರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ‘ಆಯುಷ್ಮಾನ್‍ಭವ’ ಚಿತ್ರ ಮಲಯಾಳಂನ ಇದೇ ಹೆಸರಿನ ಚಿತ್ರದ ರಿಮೇಕ್ ಎಂಬುದನ್ನು ಚಿತ್ರತಂಡ ಎಲ್ಲೂ ಹೇಳಿಲ್ಲ. ಮಲಯಾಳಂ ಚಿತ್ರವನ್ನು ರಿಮೇಕ್ ಮಾಡಿ ಗೆದ್ದಿರುವ ವಾಸು, ಶಿವರಾಜ್‍ಕುಮಾರ್ ಅವರ ಜೊತೆಗೂಡಿ ಒಂದು ರಿಮೇಕ್ ಹಿಟ್ ಚಿತ್ರ ಕೊಡುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ರಿಮೇಕ್ ಚಿತ್ರವೇ ಆದರೆ ಮಲಯಾಳಂನಲ್ಲಿ ನಟ ಜಯರಾಮ್ ಮಾಡಿದ ಪಾತ್ರವನ್ನು ಇಲ್ಲಿ ಶಿವರಾಜ್‍ಕುಮಾರ್ ಮಾಡಲಿದ್ದಾರೆ. ಮಲಯಾಳಂನ ‘ಆಯುಷ್ಮಾನ್‍ಭವ’ಕ್ಕೆ ಸುರೇಶ್ ವಿನು ಡೈರೆಕ್ಟರ್ ಆಗಿದ್ದರೆ, ಪಿ.ವಾಸು ರೈಟರ್ ಆಗಿದ್ದರು.
1998ರಲ್ಲಿ ರಿಲೀಸ್ ಆಗಿದ್ದ ಚಿತ್ರ ನಟ ಜಯರಾಮ್‍ಗೆ ಓಂದೊಳ್ಳೆ ಇಮೇಜ್ ತಂದುಕೊಟ್ಟಿತ್ತು. ಮುಂದಿನ ಚಿತ್ರ ದಿನಗಳಲ್ಲಿ ವಾಸು, ರಿಮೇಕ್ ಅಥವಾ ಸ್ವಮೇಕ್ ಎಂಬುದರ ಬಗ್ಗೆ ಸ್ಪಷ್ಟನೆ ನಿಡುವರೇ ಕಾದು ನೋಡಬೇಕು.
ಇನ್ನುಳಿದಂತೆ, ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಗೌತಮ್‍ರಾಜು ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಎ.ಹರ್ಷ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಶಿವರಾಜಕುಮಾರ್ ಅವರ ಜೊತೆಗೆ, ಅನಂತನಾಗ್, ರಚಿತಾರಾಮ್, ನಿಧಿಸುಬ್ಬಯ್ಯ, ಸುಹಾಸಿನಿ, ಶಿವಾಜಿಪ್ರಭು, ಸಾಧುಕೋಕಿಲ, ರಂಗಾಯಣ ರಘು, ಯಶ್ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Be the first to comment