ಡಬ್ಬಿಂಗ್ ಮುಗಿಸಿದ ‘ ಕನ್ನಡ ಮೇಷ್ಟ್ರು’

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗಾಳಿಪಟ 2 ಚಿತ್ರದ ಡಬ್ಬಿಂಗ್ ಕೆಲಸವನ್ನು ಅನಂತ್ ನಾಗ್ ಮುಗಿಸಿದ್ದಾರೆ.

ಈ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಅನಂತ ನಾಗ್ ಅವರು ಡಬ್ಬಿಂಗ್ ಮಾಡುತ್ತಿರುವ ಚಿತ್ರವನ್ನು ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದ್ದಾರೆ.

“ನಮಸ್ತೆ..ಸಿನಿ ರಂಗದ ದಂತಕಥೆ ಗಾಳಿಪಟ 2 ಡಬ್ಬಿಂಗ್ ಮುಗಿಸಿದ ಘಳಿಗೆ.. ಒಂದು ಅತ್ಯದ್ಭುತ ಅನುಭವ..ಅನಂತ್ ಸರ್ ಗೆ ದೀರ್ಘದಂಡ ನಮನ..ಜೈ ಗಾಳಿಪಟ 2” ಎಂದು ಯೋಗರಾಜ್ ಭಟ್  ಅವರು ಹೇಳಿದ್ದಾರೆ.

ಗಾಳಿಪಟ 2 ಸಿನಿಮಾ ಆರಂಭ ಆಗಿ ಮೂರು ವರ್ಷ ಆಗುತ್ತಾ ಬಂದಿದೆ. ಆದರೆ ಕೊರೋನಾ ಕಾರಣದಿಂದ ಚಿತ್ರದ ಕೆಲಸ ತಡವಾಗಿದೆ. ಈಗಾಗಲೇ ನಾಯಕ ಗಣೇಶ್ ತಮ್ಮ ಪಾತ್ರದ ಡಬ್ಬಿಂಗ್ ಮುಗಿಸಿಕೊಟ್ಟಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಸದ್ಯದಲ್ಲೇ ಚಿತ್ರತಂಡ ರಿಲೀಸ್ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಸಿನಿಮಾದಲ್ಲಿ ಗಣೇಶ್ ಜೊತೆಗೆ ದಿಗಂತ್, ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈ ಹಿಂದೆ ಯೋಗರಾಜ್ ಭಟ್ ನಿರ್ದೇಶನದಲ್ಲಿ 2008ರಲ್ಲಿ ಬಿಡುಗಡೆಯಾಗಿದ್ದ ಗಾಳಿಪಟ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್ ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಗಾಳಿಪಟ-2 ಚಿತ್ರದಲ್ಲಿ ರಾಜೇಶ್ ಕೃಷ್ಣನ್ ಬದಲಿಗೆ ಲೂಸಿಯ ಚಿತ್ರದ ನಿರ್ದೇಶಕ ಪವನ್ ಕುಮಾರ್ ನಟಿಸುತ್ತಿದ್ದಾರೆ. ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ ಮನಸಾರೆ ಮತ್ತು ಪಂಚರಂಗಿ ಸಿನಿಮಾಗಳಲ್ಲಿ ನಟಿಸಿದ್ದರು.

ಅನಂತ್ ನಾಗ್ ಈ ಸಿನಿಮಾದಲ್ಲಿ ಕನ್ನಡ ಮೇಷ್ಟ್ರ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದನ್ನು ಯೋಗರಾಜ ಭಟ್ ಈ ಹಿಂದೆಯೇ ಘೋಷಣೆ ಮಾಡಿದ್ದರು. ಗಾಳಿಪಟ-2 ಚಿತ್ರ ಕಝಕಿಸ್ತಾನದಲ್ಲಿ ಶೂಟಿಂಗ್ ಮಾಡಲ್ಪಟ್ಟ ಮೊದಲ ಕನ್ನಡ ಸಿನಿಮಾ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

ಯೋಗರಾಜ ಭಟ್ ಅವರು ಬಿ ಸಿ ಪಾಟೀಲ್ ನಿರ್ಮಾಣದ ಗರಡಿ ಚಿತ್ರವನ್ನು ಈಗಾಗಲೇ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ರಚಿತಾರಾಮ್ ಅವರು ಆಯ್ಕೆಯಾಗಿದ್ದಾರೆ. ಯಶಸ್ ಸೂರ್ಯ ನಾಯಕ ನಟ ಆಗಿ ಅಭಿನಯಿಸುತ್ತಿರುವ ಈ ಚಿತ್ರದ ಟೈಟಲ್ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!