ಸ್ಯಾಂಡಲ್ ವುಡ್ ಗೆ ಅಂಟಿಕೊಂಡಿರುವ ಡ್ರಗ್ಸ್ ದಂಧೆಯ ಕಳಂಕ ಮುಂದುವರೆದಿದೆ. ತನಿಖೆಯ ಭಾಗವಾಗಿ ಇಂದು ಬೆಳಗ್ಗೆ ಬೆಂಗಳೂರು ಪೊಲೀಸರು ಹಲವು ಸೆಲೆಬ್ರೆಟಿಗಳ ಮನೆಯ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ನಟಿ ಸೋನಿಯಾ, ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್ ಮುಂತಾದವರ ಮನೆ ಮೇಲೆ ಬೆಂಗಳೂರಿನ ಪೋಲೀಸರು ದಾಳಿ ಮಾಡಿದ್ದಾರೆ. ಸೆಲೆಬ್ರಿಟಿಗಳ ರಾಜಾಜಿನಗರ, ಪದ್ಮನಾಭನಗರ, ಬೆನ್ಸೆನ್ ಟೌನ್‌ನಲ್ಲಿರುವ ಮನೆ ಮೇಲೆ ಡ್ರಗ್ ಪೆಡ್ಲರ್ ಥಾಮಸ್ ನೀಡಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಅವರು ಪೊಲೀಸರಿಗೆ ನೀಡಿದ ಮಾಹಿತಿಯ ಆಧಾರದ ಮೇಲೆ 2020ರಿಂದ ಡ್ರಗ್ಸ್ ಜಾಲದ ಹಿಂದೆ ಬಿದ್ದಿರುವ ಪೊಲೀಸರು ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಡ್ರಗ್ಸ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟಿಯರಾದ ರಾಗಿಣಿ ಮತ್ತು ಸಂಜನಾ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ಬಳಿಕ ಇಬ್ಬರು ಜಾಮೀನಿನ ಮೇಲೆ ಹೊರಬಂದಿದ್ದರು. ಕೆಲ ದಿನಗಳ ಹಿಂದೆ ಬಂದ ವೈದ್ಯಕೀಯ ವರದಿಯಲ್ಲಿ ಇಬ್ಬರೂ ಡ್ರಗ್ಸ್ ಸೇವಿಸಿರುವುದು ದೃಢವಾಗಿದೆ.
ಇಂದು ನಡೆಸಿರುವ ದಾಳಿಯ ವೇಳೆ ಪೊಲೀಸರಿಗೆ ಮಾದಕ ದ್ರವ್ಯ ವಸ್ತುಗಳು ಪತ್ತೆಯಾದಲ್ಲಿ ಇನ್ನಷ್ಟು ಸೆಲೆಬ್ರಿಟಿಗಳು ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.
ಡ್ರಗ್ಸ್ ಪೆಡ್ಲರ್ ಹಾಗೂ ಕನ್ನಡ ಚಿತ್ರರಂಗದ ನಟ, ನಟಿಯರಿಗೆ ಇರುವ ನಂಟನ್ನು ಕಂಡುಹಿಡಿಯುವ ನಿಟ್ಟಿನಲ್ಲಿ ಪೊಲೀಸರು ತೀವ್ರ ತನಿಖೆಗೆ ಮುಂದಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಸೆಲೆಬ್ರಿಟಿಗಳು ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ.
_____________





Be the first to comment