ಅಣ್ಣಾವ್ರಿಗಾಗಿ ಮಠ ಶಪಥ!

ಅಣ್ಣಾವ್ರ ಮೇಲಿನ ಅಭಿಮಾನದಿಂದ ಕಳೆದ ಇಪ್ಪತ್ತು ವರ್ಷಗಳಿಂದ ಟೀ ಕುಡಿಯಲ್ಲ, ಕಾಫಿ ಕುಡಿಯಲ್ಲ, ಬಿಸಿ ನೀರಲ್ಲಿ ಸ್ನಾನ ಮಾಡಲ್ಲ, ಮೆತ್ತನೆ ಹಾಸಿಗೆಯಲ್ಲಿ ಮಲಗಲ್ಲ!!! ಎಲ್ಲವೂ ಅಣ್ಣಾವ್ರ ಮೇಲಿನ ಅಭಿಮಾನದಿಂದ

ವಿಚಿತ್ರ ಅನಿಸಿದರೂ ಇದು ಸತ್ಯ… ಅಣ್ಣಾವ್ರ ಮೇಲೆ ಅಷ್ಟೊಂದು ಅಭಿಮಾನ ಇಟ್ಕೊಂಡು ಇವತ್ತಿಗೂ ತನ್ನ ಶಪಥ ನೆರವೇರಿಸುತ್ತಾ ಬಂದಿರುವವರು ಈಗ ತಾನೇ ಕನ್ನಡ ಚಿತ್ರರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಟ, ಹಲವಾರು ಕಲಾವಿದರಿಗೆ ಅಭಿನಯ ಕಲಿಸಿರುವ ಕಿರುತೆರೆ ನಿರ್ದೇಶಕ ಎಂ.ಕೆ.ಮಠ… ಅವರ ಶಪಥದ ಕಥೆ ಹೇಳ್ತೀವಿ ಕೇಳಿ… ಅಣ್ಣಾವ್ರ ಅಪ್ಪಟ ಅಭಿಮಾನಿಯಾದ ಮಠ ತನ್ನ ಮೂಲಗುರು ಕಾಸರಗೋಡು ಚಿನ್ನ ಅವರಲ್ಲಿ ಕಾಡಿ ಬೇಡಿ ಇಸವಿ 2000 ಮಾರ್ಚ್ 6 ರಂದು ಟಿ.ಎಸ್.ನಾಗಾಭರಣ ಅವರ ತಂಡ ಸೇರ್ಕೊಂಡಿದ್ರು. ಸಂಕ್ರಾಂತಿ ಧಾರಾವಾಹಿಗೆ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡಿದ್ದರೂ ಎಲ್ಲಾ ಕೆಲಸಗಳನ್ನು ಮಾಡುತ್ತಾ ನಾಗಾಭರಣರವರ ಮೆಚ್ಚುಗೆ ಪಡೆಯುತ್ತಾ ಬೆಳೆಯುತ್ತಿದ್ದರು. ತಂಡ ಸೇರಿದ ಕೆಲವು ತಿಂಗಳಲ್ಲೇ ಕಾಡುಗಳ್ಳನಿಂದ ಅಣ್ಣಾವ್ರ ಅಪಹರಣವಾಗಿತ್ತು ಮತ್ತು ಕನ್ನಡ ಚಿತ್ರರಂಗ ಸ್ತಬ್ಧವಾಗಿತ್ತು!!. ಆಗ ಸಂಕ್ರಾಂತಿ ಸಿರೀಯಲ್ ಚಿತ್ರೀಕರಣ ನಡೆಯುತ್ತಿದ್ದಿದ್ದು ಮಾಗಡಿ ಸಮೀಪದ ತಾವರೆಕೆರೆ ಊರಲ್ಲಿ. ಚಿತ್ರರಂಗ ಸ್ಥಗಿತಗೊಂಡಾಗ ತಾವರೆಕೆರೆಯಲ್ಲೇ ಉಳ್ಕೊಂಡಿದ್ದ ಕಲಾವಿದರು, ತಂತ್ರಜ್ಞರೆಲ್ಲ ಅವರವರ ಊರಿಗೆ ತೆರಳಿದರಾದರೂ ಚಿತ್ರೀಕರಣಕ್ಕೆ ಸಂಬಂಧಿಸಿದ ಲಕ್ಷಾಂತರ ರುಪಾಯಿ ಬೆಲೆಬಾಳುವ ವಸ್ತುಗಳು ಅಲ್ಲಿದ್ದುದರಿಂದ ನಾಗಾಭರಣರವರ ಪ್ರೀತಿಯ ಹುಡುಗ ಎಂ.ಕೆ.ಮಠ ತಾವರೆಕೆರೆಯಲ್ಲೇ ಉಳೀಬೇಕಾಯ್ತು….
ಪ್ರತೀದಿನ ಅಡುಗೆ ಮಾಡ್ಕೊಳ್ಳೋದು,ತಿನ್ನೋದು, ಟೀವಿ ನೋಡೋದು ಮಲಕ್ಕೊಳ್ಳೋದು… ಇಷ್ಟೆ. ಆಗ ಇದ್ದುದೇ ಎರಡು ಚಾನೆಲ್. ಎರಡರಲ್ಲೂ ಅಣ್ಣಾವ್ರ ಅಪಹರಣದ ಸುದ್ದಿ. ಅಣ್ಣಾವ್ರಿಗೋಸ್ಕರ ಹಲವರು ಹಲವಾರು ರೀತಿಯ ಪ್ರಾರ್ಥನೆ ಮಾಡೋದು, ಉರುಳು ಸೇವೆ ಮಾಡೋದು, ಹರಕೆ ಕಟ್ಕೊಳ್ಳೋದು ನೋಡ್ತಾ ನೋಡ್ತಾ ಎಂ.ಕೆ.ಮಠ ಅವ್ರು “ಅಣ್ಣಾವ್ರು ಕಾಡಿಂದ ಬರೋವರೆಗೂ ಕಾಫಿ, ಟೀ ಕುಡಿಯಲ್ಲ” ಎಂಬ ನಿರ್ಧಾರಕ್ಕೆ ಬಂದಿದ್ರು… ಅಣ್ಣಾವ್ರ ಬಿಡುಗಡೆಯ ದಿನ ಮುಂದಕ್ಕೆ ಹೋಗ್ತಿದ್ದ ಹಾಗೇ ಅಣ್ಣಾವ್ರಿಗೆ ಇಲ್ಲದ ಬಿಸಿನೀರು ತನಗೆ ಬೇಡವೆಂದು ಬಿಸಿನೀರಲ್ಲಿ ಸ್ನಾನ ಮಾಡೋದನ್ನೇ ಬಿಟ್ರು, ಅಣ್ಣಾವ್ರಿಗಿಲ್ಲದ ಸುಪ್ಪತ್ತಿಗೆ ತನಗೆ ಬೇಡವೆಂದು ಮೆತ್ತನೆಯ ಬೆಡ್ಡಲ್ಲಿ ಮಲಗೋದು ಬಿಟ್ಟು ಬರೀ ನೆಲದಲ್ಲಿ ಚಾಪೆ ಹಾಸ್ಕೊಂಡು ಮಲಗೋಕೆ ಪ್ರಾರಂಭ ಮಾಡಿದ್ರು… ಅಣ್ಣಾವ್ರು ನೂರಾಹತ್ತು ದಿನಗಳ ಬಳಿಕ ಬಂದರಾದರೂ ಎಂ.ಕೆ.ಮಠ ಅವ್ರು ವರ್ಜಿಸಿದ್ದನ್ನು ಮತ್ತೆ ಅಳವಡಿಸಿಕೊಳ್ಳಲೇ ಇಲ್ಲ.

ಎರಡು ವರ್ಷಗಳ ಬಳಿಕ ಈ ವಿಷಯ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರಿಗೆ ತಿಳಿದಾಗ ಆಗ ಅವರಿದ್ದ ಪತ್ರಿಕೆಯಲ್ಲಿ ಈ ಬಗ್ಗೆ ವಿಸ್ತಾರವಾದ ಒಂದು ಲೇಖನ ಬರ್ದಿದ್ರು. ಆ ವಿಷಯ ಅಣ್ಣಾವ್ರಿಗೆ ಗೊತ್ತಾಗಿ ಅಪ್ಪಟ ಅಭಿಮಾನಿಗೆ ತನ್ನ ಕೈಯ್ಯಾರೆ ಟೀ ಕುಡಿಸಬೇಕೆಂಬ ಅಭಿಲಾಶೆ ವ್ಯಕ್ತಪಡಿಸಿ ಗಣೇಶ್ ಕಾಸರಗೋಡುರವರ ಮೂಲಕ ದಿನಾಂಕವನ್ನೂ ನಿಗಧಿ ಪಡಿಸಿದ್ರು. ಮಠ ಅವ್ರು ಅಣ್ಣಾವ್ರನ್ನ ಭೇಟಿಯಾಗಿ ಟೀ ಕುಡಿಯೋಕೆ ಇನ್ನೆರಡು ದಿನ ಇದೆ ಅನ್ನುವಾಗಲೇ ಅಣ್ಣಾವ್ರು ನಮ್ಮನ್ನಗಲಿದ್ರು. ಅಣ್ಣಾವ್ರ ಅಗಲಿಕೆಯಿಂದ ಮಮ್ಮಲ ಮರುಗಿದ ಎಂ.ಕೆ.ಮಠ ಅವ್ರು “ಅಣ್ಣಾವ್ರೇ ಹೋದ್ಮೇಲೆ ಇವೆಲ್ಲ ನನಗ್ಯಾಕೆ?” ಎಂದು ಇವತ್ತಿಗೂ ಟೀ – ಕಾಫಿ ಕುಡಿಯಲ್ಲ, ಬಿಸಿನೀರಲ್ಲಿ ಸ್ನಾನ ಮಾಡಲ್ಲ, ಮೆತ್ತನೆಯ ಮೆತ್ತೆಯಲ್ಲಿ ಮಲಗಲ್ಲ…

ಕಳೆದ ಇಪ್ಪತ್ತು ವರ್ಷಗಳಿಂದ್ಲೂ ತನ್ನ ಶಪಥವನ್ನು ಪಾಲಿಸ್ಕೊಂಡು ಬರ್ತಿರೋ ಮಠ ಈಗ ಕನ್ನಡ ಚಿತ್ರರಂಗ ಗುರುತಿಸುವ ನಟರಾಗಿ ಬೆಳೆಯುತ್ತಿದ್ದಾರೆ. ಈಗಾಗಲೇ ಪುನೀತ್ ರಾಜ್ಕುಮಾರ್ ಅವರ ರಾಜಕುಮಾರ ಚಿತ್ರದಲ್ಲಿ ಅಭಿನಯಿಸಿರುವ ಇವರು ಪ್ರಸ್ತುತ ಯುವರತ್ನ ಚಿತ್ರದಲ್ಲೂ ಅಭಿನಯಿಸ್ತಿದಾರೆ. “ಪುನೀತ್ ಅವ್ರ ಜೊತೆ ಅಭಿನಯಿಸೋವಾಗ ಅಣ್ಣಾವ್ರೇ ಎದುರಿಗಿದ್ದಾರೇನೋ ಎಂಬಂತೆ ಫೀಲಾಗತ್ತೆ” ಅನ್ನುವ ಮಠ ಅವರ ಅಭಿಮಾನವನ್ನು ಮೆಚ್ಚಲೇ ಬೇಕಲ್ಲವೆ…
ಈಗಾಗಲೇ ಮಠ ಅವರು ಜನುಮದಾತ,ಠಪೋರಿ,ಚಿಗುರಿದ ಕನಸು,ಕಲ್ಲರಳಿ ಹೂವಾಗಿ,ನಮ್ಮೆಜಮಾನ್ರು,ವಸುಂಧರ,ಗಗ್ಗರ (ತುಳು. ಈ ಚಿತ್ರದ ಅಭಿನಯಕ್ಕೆ ರಾಜ್ಯಪ್ರಶಸ್ತಿ) ಗಜಕೇಸರಿ,ರಾಮಾರಾಮಾರೇ,ಮದಿಮೆ (ತುಳು)ಮಿಸ್ಟರ್ & ಮಿಸಸ್ ರಾಮಾಚಾರಿ,
ರಾಜಕುಮಾರ,ಮುಕುಂದ ಮುರಾರಿ,ಮದಿಪು (ತುಳು),ಭೇಟಿ,ಲಾಕ್,ಒಂದಲ್ಲಾ ಎರಡಲ್ಲಾ,ಮಹಿರ,ತಾರಕಾಸುರ… ಚಿತ್ರಗಳಲ್ಲಿ ಅಭಿನಯಿಸಿ ತಮ್ಮದೇ ಆದ‌ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ.
ಇನ್ನು, ಇವರು ಪ್ರಮುಖ‌ ಪಾತ್ರದಲ್ಲಿ ಅಭಿನಯಿಸಿರುವ ಮೇಲೊಬ್ಬ ಮಾಯಾವಿ,
ಗರ್ನಲ್,ಅಬ್ಬ (ಬ್ಯಾರಿ ಭಾಷೆ),ಬೆಯಿಲ್ ಕೋಲು (ಬ್ಯಾರಿ ಭಾಷೆ) ಬಿಡುಗಡೆಯ ಹಂದಲ್ಲಿದ್ದರೆ.. ಚಿತ್ರೀಕರಣದಲ್ಲಿರೋದು
ಯುವರತ್ನ,ವರದ,ರಾಜಯೋಗ,ಸ್ಟೇಟ್ಮೆಂಟ್ ಚಿತ್ರಗಳು.
ಕಳೆದ ಇಪ್ಪತ್ತು ವರ್ಷಗಳಿಂದ ಅಣ್ಣಾವ್ರ ನೆನಪಿಗಾಗಿ ತನ್ನ ಶಪಥವನ್ನು ನೆರವೇರಿಸುತ್ತಾ ಬಂದಿರುವ ಈ ಅಣ್ಣಾವ್ರ ಅಪ್ಪಟ ಅಭಿಮಾನಿ ತನ್ನ ನಟನೆಯಿಂದಲೇ ಕನ್ನಡಿಗರ ಮನೆಮಾತಾಗಲಿ, ಈ ಕಲಾವಿದನಿಗೆ ಹೆಚ್ಚೆಚ್ಚು ಅವಕಾಶಗಳು ಸಿಗಲಿ ಎಂದು ಹಾರೈಸೋಣ ಅಲ್ಲವೆ…

This Article Has 2 Comments
  1. Pingback: regression testing

  2. Pingback: CI CD

Leave a Reply

Your email address will not be published. Required fields are marked *

Translate »
error: Content is protected !!