ಕರ್ನಾಟಕ ಸರಕಾರ ನೀಡುವ 2019ನೇ ಸಾಲಿನ ಡಾ. ರಾಜ್ ಕುಮಾರ್ ಪ್ರಶಸ್ತಿಗೆ ಹಿರಿಯ ನಟಿ ಉಮಾಶ್ರೀ ಅವರು ಆಯ್ಕೆಯಾಗಿದ್ದಾರೆ.
ರಾಜ್ಯ ಸರ್ಕಾರ ಈ ಸಂಬಂಧ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದೆ. ಉಮಾಶ್ರೀ ಅವರಿಗೆ 5 ಲಕ್ಷ ರೂಪಾಯಿ ನಗದು ಹಾಗೂ 50 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು.
ಅಂತೆಯೇ 2019ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಹಿರಿಯ ನಿರ್ದೇಶಕ ಎನ್ ಆರ್ ನಂಜುಂಡೇಗೌಡ ಭಾಜನರಾಗಿದ್ದಾರೆ. ಅವರಿಗೆ ಪ್ರಶಸ್ತಿ ಜೊತೆಗೆ 5 ಲಕ್ಷ ರೂಪಾಯಿ ನಗದು ಹಾಗೂ 50 ಗ್ರಾಂ ಚಿನ್ನದ ಪದಕ ನೀಡಲಾಗುವುದು.
2019ನೇ ಸಾಲಿನ ಡಾ. ವಿಷ್ಣುವರ್ಧನ ಪ್ರಶಸ್ತಿಗೆ ನಿರ್ಮಾಪಕ ಹಾಗೂ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೋ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ 5 ಲಕ್ಷ ರೂಪಾಯಿ ನಗದು ಹಾಗೂ 50 ಗ್ರಾಂ ಚಿನ್ನದ ಪದಕ ಒಳಗೊಂಡಿದೆ.2019ನೇ ಸಾಲಿನ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ ಬೆಳ್ಳಿ ತೊರೆ ಸಿನಿಮಾ ಪ್ರಬಂಧಗಳು ಆಯ್ಕೆಯಾಗಿದೆ. ರಘುನಾಥ ಚ.ಹ. ಇದನ್ನು ಬರೆದಿದ್ದು, ಅಂಕಿತ ಪುಸ್ತಕದ ಪ್ರಕಾಶ ಕಂಬತ್ತಳ್ಳಿ ಪ್ರಕಟಿಸಿದ್ದಾರೆ. ಇವರಿಬ್ಬರಿಗೂ ತಲ 20 ಸಾವಿರ ರೂಪಾಯಿ ನಗದು ಹಾಗೂ 50 ಗ್ರಾಂ ಬೆಳ್ಳಿಯ ಪದಕ ನೀಡಲಾಗುವುದು.
2019ನೇ ಸಾಲಿನ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಗುಳ್ಳೆ ಪಾತ್ರವಾಗಿದೆ. ನಿರ್ದೇಶಕ ಶ್ರೀನಾಥ್ ಎಸ್ ಹಡಗಲಿ ಹಾಗೂ ನಿರ್ಮಾಪಕ ಮನೋಹರ್ ಎಸ್ ಅಯ್ಯರ್ ಅವರಿಗೆ ತಲಾ 25 ಸಾವಿರ ರೂಪಾಯಿ ನಗದು ಹಾಗೂ 50 ಗ್ರಾಂ ಬೆಳ್ಳಿಯ ಪದಕ ನೀಡಲಾಗುವುದು.






Be the first to comment