ಹಿಂದಿಯಲ್ಲಿ ಜೀವನಾಧಾರಿತ ಸಿನಿಮಾಗಳು, ಧಾರಾವಾಹಿಗಳು ಹಿಂದಿನಿಂದಲೂ ತೆರೆ ಮೇಲೆ ಬಂದಿವೆ. ಐತಿಹಾಸಿಕ, ಧಾರ್ಮಿಕ, ಪುರಾಣಕ್ಕೆ ಸಂಬಂಧಿಸಿದ ವಿಷಯಗಳು ಸಿನಿಮಾ, ಧಾರಾವಾಹಿಗಳ ರೂಪದಲ್ಲಿ ಬಂದಿವೆ. ಇದೀಗ ಇಂತಹದ್ದೇ ಒಂದು ಧಾರಾವಾಹಿ ಹಿಂದಿಯಲ್ಲಿ ತರಲು ಸಿದ್ಧತೆ ನಡೆದಿದೆ.
ಭಾರತದ ಇತಿಹಾಸದಲ್ಲಿ ತಮ್ಮೇ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ ನಾಯಕ ಡಾ. ಬಿ.ಆರ್.ಅಂಬೇಡ್ಕರ್. ಭಾರತ ಸಂವಿಧಾನ ಅಂದ್ರೆ ಎಲ್ಲರಿಗೂ ನೆನಪಿಗೆ ಬರುವುದು ಅಂಬೇಡ್ಕರ್. ಇವರ ಜೀವನಾಧಾರಿತ ‘ಏಕ್ ಮಾಹಾನಾಯಕ್’ ಧಾರಾವಾಹಿಯ ನಿರ್ದೇಶನದ ಜವಾಬ್ದಾರಿಯನ್ನು ಇಮ್ತಿಯಾಜ್ ಪಂಜಾಬಿ ವಹಿಸಿಕೊಂಡಿದ್ದಾರೆ.
ಈ ಧಾರಾವಾಹಿಯ ಮುಖ್ಯ ಪಾತ್ರವಾದ ಅಂಬೇಡ್ಕರ್ ಪಾತ್ರಕ್ಕೆ ಮರಾಠಿ ನಟ ಪ್ರಸಾದ್ ಜವಾಡೆ ಬಣ್ಣ ಹಚ್ಚುತ್ತಿದ್ದಾರೆ. ಇನ್ನು ಅಂಬೇಡ್ಕರ್ ತಂದೆ ಮತ್ತು ತಾಯಿ ಪಾತ್ರದಲ್ಲಿ ನೇಹಾ ಜೋಶಿ ಮತ್ತು ಜಗನ್ನಾಥ್ ನವಾಂಗುನ್ನೆ ಕಾಣಿಸಿಕೊಳ್ಳಲಿದ್ದಾರೆ.
ಬಾಲ ಅಂಬೇಡ್ಕರ್ ಪಾತ್ರವನ್ನು ಆಯುದ್ ಭನುಶಾಲಿ ನಿರ್ವಹಿಸುತ್ತಿದ್ದಾರೆ. ತಮ್ಮ ಪಾತ್ರದ ಬಗ್ಗೆ ಮಾತನಾಡಿರುವ ಪ್ರಸಾದ್, ಸಮಾನತೆಗಾಗಿ ಮತ್ತು ಏಕತೆಗಾಗಿ ಹೋರಾಟ ಮಾಡಿದ ಅಂಬೇಡ್ಕರ್ ಜೀವನವನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗುತ್ತದೆ ಎಂದಿದ್ದಾರೆ. ಈ ಧಾರಾವಾಹಿಗಾಗಿ ಇತಿಹಾಸ ತಜ್ಞ ಮತ್ತು ಸಂಶೋಧಕ ಹರಿ ನರ್ಕೆ ಅವರಿಂದ ಮಾಹಿತಿ ಪಡೆಯಲಾಗಿದೆ.
ಈ ಧಾರಾವಾಹಿಗಾಗಿ ಕಥೆ ಸಿದ್ಧ ಮಾಡಿರುವ ಶಾಂತಿ ಭೂಷಣ್, ಅಂಬೇಡ್ಕರ್ ಕೇವಲ ಸ್ವಾತಂತ್ರ್ಯಕ್ಕಾಗಿ ಮಾತ್ರ ಹೋರಾಟ ಮಾಡಲಿಲ್ಲ. ಭಾರತದ ಬದಲಾವಣೆಗೂ ಹೋರಾಟ ಮಾಡಿದ್ದಾರೆ ಎಂದಿದ್ದಾರೆ. ಧಾರಾವಾಹಿಯನ್ನು ಸ್ಮೃತಿ ಸಿಂಧೆಯವರ ಎಸ್ಒಬಿಒ ಫಿಲ್ಮ್ ನಿರ್ಮಾಣ ಮಾಡುತ್ತಿದ್ದು, ಇದೇ ಡಿಸೆಂಬರ್ 17ರಿಂದ ಪ್ರಸಾರವಗಲಿದೆ.
Be the first to comment