ಬಣ , ಪಂಥಗಳ ಆಧಾರದ ದ್ವೇಷದಲ್ಲಿ ಭಾವನೆಗೆ ಧಕ್ಕೆ ಎಂಬ ಹುಸಿ ಆರೋಪದಡಿ ಸಿನಿಮಾವನ್ನು ವಿರೋಧಿಸುವುದು ತಪ್ಪು ಎಂದು ಗೀತ ರಚನೆಕಾರ ಕವಿರಾಜ್ ಅವರು ಡಾಲಿ ಧನಂಜಯ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎನ್ನುವ ವಿವಾದದ ಬೆನ್ನಲ್ಲೇ ಡಾಲಿ ಬೆಂಬಲಕ್ಕೆ ನಿಂತಿರುವ ಕವಿರಾಜ್, ಫೇಸ್ಬುಕ್ ನಲ್ಲಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಯಶ್ , ರಿಷಭ್ ಶೆಟ್ಟಿ ಅವರಂತೆ ಡಾಲಿ ಧನಂಜಯ್ ಕೂಡಾ ಇಡೀ ಸಿನಿಮಾ ಉದ್ಯಮಕ್ಕೆ ತಿರುವು ಕೊಡಬಲ್ಲ ತುಡಿತ ಮತ್ತು ಸಾಮರ್ಥ್ಯವಿರುವ ಕ್ರಿಯಾಶೀಲ , ಸೃಜನಶೀಲ ಯುವ ನಟ . ಈಗಾಗಲೇ ಉದ್ಯಮಕ್ಕೆ ಕಾಲಿಡುವ ಹೊಸ ಪ್ರತಿಭೆಗಳಿಗೆ ತಮ್ಮ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ಅವಕಾಶ ನೀಡುವ ಹೆಜ್ಜೆಯಿಟ್ಟಿದ್ದಾರೆ. ಇದೀಗ ಪ್ರದರ್ಶನ ಗೊಳ್ಳುತ್ತಿರುವ ಅವರ ಹೆಡ್ ಬುಷ್ ಚಿತ್ರವು ಉತ್ತಮವಾಗಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಒಂದು ಕಲೆ. ನಿರ್ದೇಶಕನ ಸೃಜನಶೀಲ ಅಭಿವ್ಯಕ್ತಿಯ ಮಾಧ್ಯಮ. ಬಣ , ಪಂಥಗಳ ಆಧಾರದ ದ್ವೇಷದಲ್ಲಿ ಭಾವನೆಗೆ ಧಕ್ಕೆ ಎಂಬ ಹುಸಿ ಆರೋಪದಡಿ ಸಿನಿಮಾವನ್ನು ವಿರೋಧಿಸುವುದು ತಪ್ಪು ಎಂದಿದ್ದಾರೆ.
ಜನರಲ್ ಆಗಿ, ಗೈಡ್ ಲೈನ್ಸ್ ಅನುಸಾರ ಅಸಮ್ಮತ ವಿಚಾರಗಳನ್ನು ಸಿನಿಮಾದಲ್ಲಿ ಸೇರಿಸದಂತೆ ತಡೆಯಲು ಸರ್ಕಾರವೇ ನೇಮಿಸಿರುವ ಸೆನ್ಸಾರ್ ಮಂಡಳಿ ಇದೆ.
ವೀರಗಾಸೆ ಕುಣಿತದವರ ಮಾರುವೇಷದಲ್ಲಿ ಬಂದವರನ್ನು ಥಳಿಸುವ ದೃಶ್ಯಗಳ ಕುರಿತು ಧನಂಜಯ್ ಅವರ ವಿವರಣೆಯು ಸಮಂಜಸವಾಗಿದೆ. ಯಾವುದೋ ಪರಭಾಷಾ ಹಾಡಿನ ಟ್ಯೂನಿಗೆ ಹೋಲಿಕೆ ಇರುವ ಕಾರಣಕ್ಕೆ ಕಾಂತಾರ ಚಿತ್ರದ ಹಾಡಿಗೆ ಅಪಪ್ರಚಾರ ಮಾಡುತ್ತಿರುವವರಿಗೂ ಇದೇ ಮಾತು ಅನ್ವಯಿಸುತ್ತೆ . ಆ ಹಾಡುಗಳಲ್ಲಿ ಕೆಲವು ಸಾಮ್ಯತೆ ಇರಬಹುದೇ ಹೊರತು , ಇದು ಅದರ ನಕಲು ಖಂಡಿತಾ ಅಲ್ಲ ಎಂಬುದು ಎರಡು ದಶಕಕ್ಕು ಹೆಚ್ಚು ಕಾಲ ಗೀತರಚನೆಯ ಅನುಭವವಿರುವ ನನ್ನ ಖಚಿತ ನಿಲುವು ಎಂದಿದ್ದಾರೆ.
ಧನಂಜಯ್ ಕನ್ನಡ ಚಿತ್ರರಂಗದ ಆಸ್ತಿ. ಧನಂಜಯ್ ಸೂಕ್ಷ್ಮ ಸಂವೇದನೆಯುಳ್ಳ ವಿಚಾರಶೀಲ ,ಕಲಾ ಪ್ರೇಮಿ. ಅವರಿಂದ ಯಾವ ಕಲೆಗೂ ಅಪಚಾರ ಆಗಿಲ್ಲ ,ಆಗುವುದಿಲ್ಲ ಎಂಬ ನಂಬಿಕೆ ನಮಗಿದೆ. ಅವರ ಮತ್ತು ಹೆಡ್ ಬುಷ್ ನಿರ್ದೇಶಕರ ಸೃಜನಶೀಲ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾನು ಸದಾ ಬೆಂಬಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.
___
Be the first to comment