2023-24ನೇ ಸಾಲಿನ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ ಆಗಿ ನಟ ಡಾಲಿ ಧನಂಜಯ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.
ಈ ಬಗ್ಗೆ ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಜೆಸಿಂತ ಆದೇಶ ಹೊರಡಿಸಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿಯ ವತಿಯಿಂದ ಪ್ರತಿವರ್ಷ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಆಯೋಜಿಸುತ್ತಿದ್ದು, ಅದರಂತೆ 2023-24ನೇ ಸಾಲಿನಲ್ಲಿ 15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಫೆಬ್ರವರಿ 29 ರಿಂದ ಮಾರ್ಚ್ 7ರವರೆಗೆ ಏರ್ಪಡಿಸಲಾಗಿದೆ.
ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಫೆ. 29ರಂದು ವಿಧಾನಸೌಧದ ಪೂರ್ವ ದ್ವಾರದ ಮೆಟ್ಟಿಲುಗಳ ಮುಂಭಾಗ ಏರ್ಪಡಿಸಲಾಗಿದೆ. ಸಮಾರೋಪ ಸಮಾರಂಭವನ್ನು ಮಾರ್ಚ್ 7ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಲಾಗಿದೆ.
ಕನ್ನಡ ಚಿತ್ರೋದ್ಯಮ 90ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆ ಮತ್ತು ರಾಜ್ಯ ಕರ್ನಾಟಕ ಎಂದು ಮರುನಾಮಕರಣ ಮಾಡಿದ 50ನೇ ವರ್ಷಾಚರಣೆಯ ಭಾಗವಾಗಿ 30 ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ಮುಖ್ಯಮಂತ್ರಿಗಳ ಕಚೇರಿಯ ನಿರ್ದೇಶನದ ಆಧಾರದ ಮೇಲೆ, ಮಾನವ ಘನತೆ, ಸಾಮಾಜಿಕ ನ್ಯಾಯ, ಪರಿಸರ ಕಾಳಜಿ ಮತ್ತು ಲಿಂಗ ಅಸಮಾನತೆಗಳನ್ನು ಸರಿಪಡಿಸುವ ಬಗ್ಗೆ ಮಾತನಾಡುವ 15 ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
—

Be the first to comment