‘ಆರ್ಯವರ್ಧನ್’ ಪಾತ್ರಧಾರಿ ಯಾರು?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆಜೊತೆಯಲಿ’ ಧಾರಾವಾಹಿಯ ನಾಯಕ ನಟ ಅನಿರುದ್ಧ್ ಅವರ ಬದಲು ಬೇರೆ ನಟನ ಆಯ್ಕೆ ಬಗ್ಗೆ ಸಾಕಷ್ಟು ಚರ್ಚೆ ಶುರು ಆಗಿದೆ.

ಒಂದು ಕಡೆ ವಿಕ್ರಾಂತ್ ರೋಣ, ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿಯರನ್ನು ಚಾನೆಲ್ ಕರೆ ತರಲಿದೆ ಎಂದು ಹೇಳಲಾಗುತ್ತಿದೆ.

ಇನ್ನೊಂದು ಕಡೆ ಅನಿರುದ್ಧ್ ರಿಂದ ತೆರೆವಾಗಿರುವ ಆರ್ಯವರ್ಧನ್ ಪಾತ್ರಕ್ಕೆ ಅಶ್ವಿನಿ ನಕ್ಷತ್ರ ಖ್ಯಾತಿಯ ಜೆಕೆ ಅಲಿಯಾಸ್ ಜಯರಾಂ ಕಾರ್ತಿಕ್ ಬರಲಿದ್ದಾರೆ ಎನ್ನಲಾಗುತ್ತಿದೆ. ಅಶ್ವಿನಿ ನಕ್ಷತ್ರದಲ್ಲಿ ಜೆಕೆ ಪಾತ್ರವನ್ನು ಜನ ಸಾಕಷ್ಟು ಮೆಚ್ಚಿಕೊಂಡಿದ್ದರು. ಇಲ್ಲಿಯೂ ಸಹ ಅದೇ ರೀತಿಯ ಗತ್ತಿನ ಅವಶ್ಯಕತೆ ಇರುವುದರಿಂದ ಜೆಕೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.

ಈ ಬಗ್ಗೆ ನಿರ್ದೇಶಕರು ಮತ್ತು ಜೀ ಕನ್ನಡ ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ಸಿಗಬೇಕಿದೆ. ಆದರೆ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

‘ಜೊತೆಜೊತೆಯಲಿ’ ಧಾರಾವಾಹಿಯ ನಾಯಕ ನಟ ಅನಿರುದ್ಧ್ ಹಾಗೂ ನಿರ್ದೇಶಕ ಆರೂರು ಜಗದೀಶ್ ನಡುವಿನ ಭಿನ್ನಾಭಿಪ್ರಾಯ ತಾರಕಕ್ಕೇರಿ ಇತ್ತೀಚೆಗೆ ಇಬ್ಬರೂ ಸುದ್ದಿಗೋಷ್ಠಿ ನಡೆಸಿ ಆರೋಪ, ಪ್ರತ್ಯಾರೋಪಗಳನ್ನು ಮಾಡಿದ್ದರು.

ಈಗಾಗಲೇ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಇನ್ನು ಮುಂದೆ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಇರುವುದಿಲ್ಲ ಎಂದು ಜೀ ವಾಹಿನಿ ಸ್ಪಷ್ಟ ಪಡಿಸಿದೆ.

ಧಾರಾವಾಹಿಯಿಂದ ಕೈ ಬಿಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನಿರುದ್ಧ್, ನನ್ನನ್ನು ಕೇಳದೆ ಎರಡು ವರ್ಷ ಯಾವ ಚಾನೆಲ್‍ನಲ್ಲೂ ಆಕ್ಟ್ ಮಾಡಬಾರದು ಎಂದು ನಿರ್ಬಂಧ ಹಾಕಿದ್ದಾರೆ. ಈ ಬಗ್ಗೆ ಒನ್ ಸೈಡ್ ನಿರ್ಧಾರ ಮಾಡ್ತಿದ್ದಾರೆ. ನಾಲ್ಕು ಗೋಡೆ ಮಧ್ಯೆ ಜಗಳವಾಡಿದ್ದನ್ನು ಬೀದಿಗೆ ತರಬಾರದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸೆಟ್‍ನಲ್ಲಿ ಕೆಲಸಕ್ಕಾಗಿ ಜಗಳ ಮಾಡಿದ್ದೇನೆ. ಮನುಷ್ಯನಿಗೆ ಕೋಪ ಸಹಜ. ಕಸದ ಹತ್ತಿರ ನಿಂತು ವಿಡಿಯೋ ಮಾಡಿದ್ದೇನೆ. ದುರಂಹಕಾರ ಇದ್ದಿದ್ರೆ ಈ ರೀತಿ ಮಾಡುತ್ತಿದ್ದೆನಾ. ನಾನು ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ. ನನಗೆ ಇನ್‍ಸೆಕ್ಯೂರಿಟಿ ಬರಲು ಸಾಧ್ಯವೇ ಇಲ್ಲ. ನಿರ್ದೇಶಕರು ನನ್ನ ಹತ್ತಿರ ಬಂದು ಚರ್ಚೆ ಮಾಡಬಹುದಿತ್ತು ಎಂದು ಹೇಳಿದ್ದಾರೆ.

ಈ ಮುನ್ನ ನಿರ್ದೇಶಕ ಆರೂರು ಜಗದೀಶ್ ಅವರು, ಅನಿರುದ್ಧ್ ಅವರು ಆಕ್ಟ್ ಮಾಡಲು ನಿರಾಕರಿಸಿ ಶೂಟಿಂಗ್ ನಿಂದ ಹೊರಗೆ ನಡೆದಿದ್ದಾರೆ. ಸೆಟ್ ನಲ್ಲಿ ಹಲವು ಬಾರಿ ಈ ರೀತಿಯ ವರ್ತನೆ ತೋರಿದ್ದಾರೆ ಎಂದು ಆರೋಪ ಮಾಡಿದ್ದರು.
____

Be the first to comment

Leave a Reply

Your email address will not be published. Required fields are marked *

Translate »
error: Content is protected !!