ನಟ ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರಗಳನ್ನು ಕಳುಹಿಸಿದ ಪ್ರಕರಣದಲ್ಲಿ ನಿರ್ದೇಶಕ ರಮೇಶ್ ಕಿಟ್ಟಿ ಎನ್ನುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸುದೀಪ್ ಆಪ್ತವಲಯದಲ್ಲಿದ್ದ ಆರೋಪಿ, ಕಿಚ್ಚ ಸುದೀಪ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷನಾಗಿಯೂ ಕೆಲಸ ನಿರ್ವಹಿಸಿದ್ದರು. ನಂತರದ ದಿನಗಳಲ್ಲಿ ಹಣಕಾಸು ವಿಚಾರವಾಗಿ ಅವರಿಬ್ಬರ ಮಧ್ಯೆ ವೈಷಮ್ಯ ಉಂಟಾಗಿತ್ತು.ಈ ಕಾರಣಕ್ಕೆ ದೂರವಾಗಿದ್ದ ರಮೇಶ್, ಸುದೀಪ್ ಅವರಿಗೆ ಬೆದರಿಕೆ ಪತ್ರ ಕಳುಹಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಕಿಚ್ಚ ಸುದೀಪ್ ಅವರ ಅಭಿಮಾನಿಯಾಗಿದ್ದ ರಮೇಶ್ ಕಿಟ್ಟಿ, ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸ್ವತಃ ತಾವೇ 2 ಕೋಟಿಯನ್ನು ಟ್ರಸ್ಟ್ನಲ್ಲಿ ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಆದರೆ ಹಣವನ್ನು ಸುದೀಪ್ ಹಿಂತಿರುಗಿಸದ ಕಾರಣ ಸಿಟ್ಟಾಗಿದ್ದ ರಮೇಶ್ ಟ್ರಸ್ಟ್‌ನಿಂದ ಹೊರ ಬಂದಿದ್ದರು. ಸದ್ಯ ಹಣದ ವ್ಯವಹಾರದ ಕುರಿತು ಯಾವುದೇ ದಾಖಲೆಗಳಿಲ್ಲ, ತನಿಖೆಗೆ ಅಗತ್ಯವೆನಿಸಿದರೆ ಸುದೀಪ್ ಅವರ ಹೇಳಿಕೆ ಪಡೆಯಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ತಿಂಗಳು ಮಾರ್ಚ್ 10 ರಂದು ಸುದೀಪ್ ನಿವಾಸಕ್ಕೆ ಬೆದರಿಕೆ ಪತ್ರಗಳನ್ನು ಕಳುಹಿಸಲಾಗಿದೆ ಎಂದು ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜು ಮಾರ್ಚ್ 29 ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.
ಪ್ರಕರಣದ ಬಗ್ಗೆ ಕಿಚ್ಚ ಸುದೀಪ್ ಅವರ ಪ್ರತಿಕ್ರಿಯೆಯನ್ನು ಎದುರು ನೋಡಲಾಗುತ್ತಿದೆ.
——
Be the first to comment