ದಿಲ್ ಮಾರ್

Movie Review: ಹೃದಯ ಸಮುದ್ರ ಕಲಕುವ ಚಿತ್ರ ದಿಲ್ ಮಾರ್

ಚಿತ್ರ : ದಿಲ್ ಮಾರ್
ನಿರ್ದೇಶನ : ಎಂ. ಚಂದ್ರಮೌಳಿ
ನಿರ್ಮಾಣ : ನಾಗರಾಜ ಭದ್ರಾವತಿ
ತಾರಾ ಬಳಗ : ರಾಮ್ ಗೌಡ, ಡಿಂಪಲ್ ಹಯಾತಿ ಮತ್ತು ಅದಿತಿ ಪ್ರಭುದೇವ , ಸಾಯಿ ಕುಮಾರ್, ಶರತ್ ಲೋಹಿತಾಶ್ವ, ಗೋವಿಂದೇಗೌಡ, ಅಶೋಕ್, ಶೇಖರ್, ಧೂಲ್ ಪ್ರಕಾಶ್, ನವೇಂದ್ರ, ರಘು, ಶ್ರೀವಿ, ಮಂಜು ಮುಂತಾದವರು.
ಸಂಗೀತ : ರಾಧನ್
ರೇಟಿಂಗ್: 3.5/5

ಅದು ಕಥಾ ನಾಯಕಿಯ ಬೃಹತ್ ಬಂಗಲೆ. ಅದರ ಮುಂದೆ ಆಳುಕಾಳುಗಳು.‌ ಆದರೆ ಅವರ ಕ್ಯಾರೇ ಇರದಂತೆ ಆವಾಜ್ ಹಾಕುವ ಯುವಕ. ಅವನನ್ನು ಹೊಡೆದೋಡಿಸುವ ಬದಲು ಮಗಳಲ್ಲೇ ಹೋಗಿ ಮಾತನಾಡಲು ಹೇಳುವ ಉದಾರ ಮನಸಿನ ತಂದೆ. ಮಗಳು ಆ ಯುವಕನ‌ ಮುಂದೆ ನಿಂತು ಹೇಳುವುದೊಂದೇ, “ನಾನು ಈಗಾಗಲೇ ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಅವನೊಂದಿಗೆ‌ ನನ್ನ ಮದುವೆ ಫಿಕ್ಸ್ ಆಗಿದೆ.!” ಸಿನಿಮಾದ ಆರಂಭದಲ್ಲೇ‌ ನಾಯಕನಿಗೆ ನಾಯಕಿಯಿಂದ ಇಂಥದೊಂದು ಉತ್ತರ ನಿರೀಕ್ಷಿಸುವುದು ಕಷ್ಟ. ಆದರೆ ಇದನ್ನು ಸಾಧ್ಯ ಮಾಡಿರುವುದು ದಿಲ್ ಮಾರ್ ಚಿತ್ರ.

ಇಲ್ಲಿ ಬಂಗಲೆ ಮನೆಯ ನಾಯಕಿಯಾಗಿ ಅದಿತಿ ಪ್ರಭುದೇವ ಇದ್ದರೆ, ಆಕೆಯ ಹಿಂದೆ ಅಲೆಯುವ ಹುಚ್ಚು ಪ್ರೇಮಿಯಾಗಿ ನವ ನಾಯಕ ರಾಮ್ ನಟಿಸಿದ್ದಾರೆ. ಇಂಥದೊಂದು ಕ್ರೇಜಿ ಸನ್ನಿವೇಶವನ್ನು ನಿರ್ದೇಶಕ ಚಂದ್ರಮೌಳಿ ಸೃಷ್ಟಿಸಿದ್ದಾರೆ.

ಕೆಜಿಎಫ್ ಚಿತ್ರದಲ್ಲಿ ಸಂಭಾಷಣೆ ಬರೆದು ಗುರುತಿಸಿಕೊಂಡ ಚಂದ್ರಮೌಳಿ‌ ಇಲ್ಲಿ ಪ್ರತಿ ಮಾತುಗಳಲ್ಲೂ ಸಿನಿಮಾ‌ವನ್ನೇ ಕಟ್ಟಿದ್ದಾರೆ. ಹಾಗಂತ ವಿಷುಯಲ್ ಬ್ಯೂಟಿಗೆ ಕೊಂಚವೂ ಕೊರತೆಯಾಗಿಲ್ಲ. ಅದು ರೌಡಿಗಳ ಅಡ್ಡವಾದರೂ, ಹೊಡೆದಾಟದ ಜಾಗವಾದರೂ ಎಲ್ಲವನ್ನೂ ಕಲಾತ್ಮಕವಾಗಿಯೇ ತೋರಿಸಲಾಗಿದೆ. ಇದಕ್ಕಾಗಿ ಛಾಯಾಗ್ರಾಹಕ ತನ್ವಿಕ್ ನ್ನು ಮೆಚ್ಚಲೇಬೇಕು.

ರಾಮ್ ಇಲ್ಲಿ ಜೀವ ತುಂಬಿರುವುದು ಶುಕ್ಲಾ ಎನ್ನುವ ಪ್ರೇಮಿಯ ಪಾತ್ರಕ್ಕೆ. ಅದಾಗಲೇ ಪ್ರೀತಿಯಲ್ಲಿರುವ ನಾಯಕಿಯ ಬೆನ್ನ ಹಿಂದೆ ಈ ಯುವಕ ಹುಚ್ಚನಂತೆ ಸುತ್ತುತ್ತಾನೆ. ಇದಕ್ಕೆ ಕಾರಣ ತಿಳಿಯಬೇಕಾದರೆ ಮಧ್ಯಂತರದ ತನಕ ಕಾಯಲೇಬೇಕು. ಅಲ್ಲಿ ಮತ್ತೊಂದು ಸುಂದರವಾದ ಪ್ರೇಮ‌ಕಥಾನಕವಿದೆ. ಅಲ್ಲಿ ಮಾಯಾ ಎನ್ನುವ ನಾಯಕಿ ಪಾತ್ರವನ್ನು ಡಿಂಪಲ್ ಹಯಾತಿ ನಿರ್ವಹಿಸಿದ್ದಾರೆ. ಶುಕ್ಲಾಗೆ ಆಕೆಯ ಮೇಲಿದ್ದ ಪ್ರೀತಿ ಇಲ್ಲಿಗೇಕೆ ಡೈವರ್ಟ್ ಆಯಿತು ಎನ್ನುವುದನ್ನು ತಿಳಿಯಬೇಕಾದರೆ ನೀವು ಸಿನಿಮಾ‌ ನೋಡಲೇಬೇಕು.

ರಾಮ್ ಹುಚ್ಚುತನ, ಸಂಭಾಷಣೆ, ಹೊಡೆದಾಟ ಎಲ್ಲದರಲ್ಲೂ ಚೆನ್ನಾಗಿಯೇ ಸ್ಕೋರ್ ಮಾಡಿದ್ದಾರೆ. ರಾಮ್ ಗೆ ಜೋಡಿಯಲ್ಲದ ಜೋಡಿಯಾಗಿ ಅದಿತಿ ಪ್ರಭುದೇವ ಕೂಡ ಅದ್ಭುತ ಸಾಥ್ ನೀಡಿದ್ದಾರೆ. ಈ ಸುಂದರಿಯ ನಟನೆಯಲ್ಲಿ ನಗು, ನೃತ್ಯ ಎಲ್ಲವೂ ಸೊಗಸು. ಅದಿತಿ ತಂದೆಯಾಗಿ ಶರತ್ ಲೋಹಿತಾಶ್ವ ಲೋಹದಂತೆ ಮಗಳ ಪರ ಸ್ಟ್ರಾಂಗ್ ಆಗಿ ನಿಲ್ಲುವ ಜೀವ. ಆದರೆ ನಿಜವಾದ ಡಾನ್ ಆಗಿ ಕಂಗೊಳಿಸಿರುವವರು ಮಾತ್ರ ಸಾಯಿಕುಮಾರ್. ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದ ನಟ ಗೋವಿಂದೇಗೌಡ ಇಲ್ಲಿಯೂ ತಮ್ಮ ಹಾಸ್ಯರಸಧಾರೆ ಹರಿಸಿದ್ದಾರೆ.

ಹಬ್ಬದ ಸಂಭ್ರಮದ ಬಳಿಕ‌ ಮಾಸ್ ಮಸಾಲೆ ತುಂಬಿದ ಒಂದೊಳ್ಳೆಯ ಪ್ರೇಮಕಾವ್ಯ ನೋಡಲು ಬಯಸುವವರು ಮರೆಯದೇ ನೋಡಬಹುದಾದ ಚಿತ್ರ ಇದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!