ಹಳೇ ಬಾಟಲಿಯಲ್ಲಿ, ಹಳೇ ಮದ್ಯ!
ʻಕ್ರಿಷ್ಟಲ್ ಪಾರ್ಕ್ʼನಿಂದ ಇಂಥ ಸಿನಿಮಾ?! ಛೇ!
ನಿರ್ಮಾಣ : ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ – ಟಿ.ಆರ್.ಚಂದ್ರಶೇಖರ್ ಹಾಗೂ ಸಿ.ನಂದಕಿಶೋರ್
ನಿರ್ದೇಶನ : ನಾಗರಾಜ್ ಬೆತ್ತುರ್
ಕಲಾವಿದರು : ದಿಗಂತ್ , ಕವಿತಾಗೌಡ ,
ಚೇತನ್ ಗಂಧರ್ವ, ಮಡೆನೂರು ಮನು, ಶರಣ್ಯ ಶೆಟ್ಟಿ, ಸೂರಜ್, ಸೂರ್ಯ ಮುಂತಾದವರು
ಕಥೆ, ಚಿತ್ರಕಥೆ : ಪ್ರಸನ್ನ
ಸಂಗೀತ : ಶ್ರೀಧರ್ ವಿ ಸಂಭ್ರಮ್
ಛಾಯಾಗ್ರಹಣ : ಶ್ರೀಕಾಂತ್
ಬಿಸಿನಿಮಾಸ್ ರೇಟಿಂಗ್ : 2/5
ಇಲ್ಲಿವರೆಗೆ ಕೇವಲ ಪ್ರೀತಿ-ಪ್ರೇಮದ ಕತೆಗಳಿಗೆ ಸಿಮೀತವಾಗಿದ್ದ ದಿಗಂತ್ ʻಹುಟ್ಟು ಹಬ್ಬದ ಶುಭಾಶಯಗಳುʼ ಚಿತ್ರ ಮೂಲಕ ಹೊಸ ರೂಪದಲ್ಲಿ ಅಂದ್ರೆ, ಪತ್ತೇದಾರಿಯಾಗಿ ಕಾಣಿಸಿಕೊಂಡಿದ್ದಾರೆ. ʻಓ.ಟಿ.ಟಿಯಲ್ಲಿ ನೋಡಾಬಹುದಾದ ಸಿನಿಮಾ ಇದುʼ ಎಂದು ಸಿನಿಮಾದ ಆರಂಭದಲ್ಲೇ ಅರ್ಥವಾಗುತ್ತೆ. ಆದರೂ, ನೇರವಾಗಿ ಥೀಯೆಟರ್‌ನಲ್ಲಿ ರಿಲೀಸ್ ಮಾಡಿದ್ದಕ್ಕೆ ನಿರ್ಮಾಪಕರಿಗೆ ಧನ್ಯವಾದ. ಚಿತ್ರದ ಕಥೆ ಕನ್ನಡಕ್ಕೇನೂ ಹೊಸದಲ್ಲ, ಕನ್ನಡವನ್ನು ಹೊರತುಪಡಿಸಿ ಇದೇ ರೀತಿಯ ಚಿತ್ರಗಳು ಬಂದುಹೋಗಿವೆ. ಆದರೆ, ನರೇಶನ್‌ನಲ್ಲಿ ಏನಾದ್ರೂ ಹೊಸತನ ಇದೇಯೇ ಎಂದು ಹುಡುಕಾಡಲು ಸಮಯವಿದ್ದರೆ, ಜೇಬಲ್ಲಿ ಎಕ್ಟ್ರಾ ದುಡ್ಡಿದ್ರೆ ಈ ಚಿತ್ರವನ್ನು ನೋಡಬಹುದು.
ಸಸ್ಪೆನ್ಸ್-ಥ್ರಿಲ್ಲರ್ ಕಥೆಯ ಮೂಲಕವೂ ನೋಡುಗನ ತಾಳ್ಮೆಯನ್ನು ಹೇಗೆ ಪರೀಕ್ಷೆಗೆ ಒಡ್ಡಬಹುದು ಅನ್ನುವುದದಕ್ಕೆ ಈ ಚಿತ್ರ ಬೆಸ್ಟ್ ಎಗ್ಸಾಂಪಲ್. ಒಂದು ಕೊಲೆ, ಒಂದು ಪಾರ್ಟಿ..ಅವನಿಗೆ ಇವನ ಮೇಲೆ ಡೌಟು, ಇವನಿಗೆ ಅವನ ಮೇಲೆ ಡೌಟು.. ಇಂತದ್ದನ್ನು ಎಷ್ಟು ಚಿತ್ರದಲ್ಲಿ ನೋಡಿಲ್ಲ ಹೇಳಿ. ಅಲ್ಲಲ್ಲೇ ಸುತ್ತುವ ಕ್ಯಾಮರಾ.. ರಂಗಭೂಮಿ ನಾಟಕವನ್ನು ಶೂಟ್ ಮಾಡಿದ ರೀತಿ ಭಾಸವಾಗುತ್ತದೆ. ಅಲ್ಲಲ್ಲಿ ಪ್ರೇಕ್ಷಕರನ್ನು ನಿದ್ರೆಗೆ ತಳ್ಳುವ ನಿರ್ದೇಶಕರು , ಯಾರು ಕೊಲೆ ಮಾಡಿದ್ದು ಎಂಬುದನ್ನು ಮೊದಲೇ ಹೇಳಿ. ಆತ ಯಾಕೆ ಕೊಲೆ ಮಾಡಿದ್ದ? ಅನ್ನೊದನ್ನು ಸಸ್ಪೆನ್ಸ್ ಆಗಿಟ್ಟು ಕೊನೆಯಲ್ಲಿ ಅದನ್ನು ವಿವರಿಸಿ ಒಂದು ಸುದೀರ್ಘ ʻಟಾರ್ಚರ್ʼಗೆ ಕೊನೆಗೂ ಶುಭಂ ಹೇಳುತ್ತಾರೆ.
ಇನ್ನು, ಚಿತ್ರದಲ್ಲಿ ಇರುವ ಎಲ್ಲಾ ಓವರ್ ಅನ್ನಿಸುವ ಕಾಮಿಡಿ ದೃಶ್ಯಗಳು ನಗು ತರಿಸದೆ ಮೈಪರಚಿಕೊಳ್ಳುವಂತೆ ಮಾಡುತ್ತದೆ. ʻಕಾಮಿಡಿ ಕಿಲಾಡಿʼ ಸ್ಟೇಜ್‌ನಲ್ಲಿ ಮೀಂಚಿದ ನಟರು, ಕ್ಯಾಮರಾ ಮುಂದೆ ಬಂದಾಗ ಮಂಕಾಗಿದ್ದಾರೆ. ಇವರಿನ್ನೂ ಸ್ಟೇಜ್‌ಗೂ, ಕ್ಯಾಮಾರಾಗೂ ಇರುವ ವ್ಯತ್ಯಾಸವನ್ನು ಆದಷ್ಟು ಬೇಗ ತಿಳಿದು ಕೊಂಡರೆ ಅವರ ವೃತ್ತಿಜೀವನಕ್ಕೆ ಒಳ್ಳೆಯದು. ಚಿತ್ರದಲ್ಲಿನ ಅಸಹಜ ಸಂಬಾಷಣೆಗಳು, ನಿರ್ದೇಶಕರು ಎನನ್ನೋ ಹೇಳಲು ಹೊರಟು, ʻಡಕ್‌ಔಟ್ʼ ಆದದ್ದನ್ನು ಸ್ಪಷ್ಟ ಪಡಿಸುತ್ತದೆ. ನಿರ್ದೇಶಕರು ಬರೆದುಕೊಟ್ಟ ಗಂಭಿರ ಸಂಭಾಷಣೆಗಳನ್ನು ನಟ ದಿಗಂತ, ದೂದ್‌ಪೇಡಾ ಸ್ಟೈಲ್‌ನಲ್ಲಿ ಹೇಳುವುದನ್ನು ನೋಡುವುದೇ ಕಣ್ಣಿಗೆ ಹಬ್ಬ(!). ದಿಗಂತ್, ʻದೂದ್‌ಪೇಡಾʼ ಅಲ್ಲ ಖಾರಾಬೂಂದಿ ಎಂಬುದನ್ನು ನಿರೂಪಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾರೆ. ಅವರ ಪ್ರಯತ್ನಕ್ಕೆ ಹೀಗೆ ಮುಂದುವರಿದರೆ ದೂದ್‌ಪೇಡಾವನ್ನೂ ಕಳೆದುಕೊಂಡು ಪೆಪ್ಪರ್‌ಮೆಂಟ್‌ಗೆ ಸೆಟ್ಲ್ ಆಗುವ ಸಾಧ್ಯತೆಯಿದೆ.
ನಿಮಗೆ ಕ್ರೈಮ್ ಥ್ರಿಲ್ಲರ್ ಸಿನಿಮಾಗಳು ಇಷ್ಟವಾಗುವುದಾರೆ ಒಮ್ಮೆ ನೋಡಿ ನಮಗೆ ಹೇಳಿ. ಇದು ಕ್ರೈಮ್ ಥ್ರಿಲ್ಲರ್ ಸಿನಿಮಾನ ಇದು ಎಂದು! ಈ ಕೊರೊನಾ ಭಯದಲ್ಲಿ, ಹೊಸವರ್ಷದ ಹೊಸ್ತಿಲಲ್ಲಿ ನಿಮ್ಮ ಮೂಡ್ ಅನ್ನು ರಿಪ್ರೆಷ್ ಮಾಡುವುದಕ್ಕೆ ʻಹುಟ್ಟು ಹಬ್ಬದ ಶುಭಾಶಯಗಳುʼ ಚಿತ್ರ ನೋಡುವುದನ್ನು ಬಿಟ್ಟು ಪರ್ಯಾಯ ದಾರಿಯನ್ನು ಕಂಡುಕೊಳ್ಳುವುದು ಒಳಿತು.
ಕಟ್ಟಕಡೆಯಲ್ಲಿ ಕಾಡುವ ಪ್ರಶ್ನೆ, ಕ್ರಿಷ್ಟಲ್ ಪಾರ್ಕ್‌ನಂತಹ ನಿರ್ಮಾಣ ಸಂಸ್ಥೆಯಲ್ಲಿ ಇಂಥಹ ಚಿತ್ರವೂ ತಯಾರಾಗುತ್ತಾ?! ಛೇ!
Be the first to comment