ಧೀರೆನ್ ಚಿತ್ರದ ಮುಹೂರ್ತ

ಧೀರೆನ್ ಆರ್‌ ರಾಜ್‌ಕುಮಾರ್‌ ನಾಯಕನಾಗಿ ನಟಿಸಲಿರುವ ಚಿತ್ರದ ಮುಹೂರ್ತ ಇಂದು ನಡೆದಿದೆ.

‘ಶಾಖಾಹಾರಿ’ ಸಿನಿಮಾ ಬಳಿಕ ನಿರ್ದೇಶಕ ಸಂದೀಪ್‌ ಸುಂಕದ್‌ ಈ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ.  ಸಿನಿಮಾವನ್ನು ಗೀತಾ ಪಿಕ್ಚರ್ಸ್‌ ಲಾಂಛನದಲ್ಲಿ ಗೀತಾ ಶಿವರಾಜ್‌ಕುಮಾರ್‌ ನಿರ್ಮಾಣ ಮಾಡಲಿದ್ದಾರೆ.

‘ನನ್ನ ಮೊದಲ ಸಿನಿಮಾ ಬಳಿಕ ಹಲವಾರು ಆಫರ್‌ಗಳು ಬಂದರೂ ನಾನು ನಿರಾಕರಿಸಿದ್ದೆ. ನಟನೆಗೆ ಹೆಚ್ಚಿನ ಪ್ರಾಶಸ್ತ್ಯವಿರುವ ಸಿನಿಮಾ ಮಾಡಬೇಕು ಎನ್ನುವ ಹಂಬಲವಿತ್ತು. ‘ಶಾಖಾಹಾರಿ’ ಸಿನಿಮಾ ಕರ್ನಾಟಕದಲ್ಲಷ್ಟೇ ಅಲ್ಲ ಹೊರ ರಾಜ್ಯಗಳಲ್ಲಿ ಒಟಿಟಿ ಮೂಲಕ ಸದ್ದು ಮಾಡಿದೆ. ಈ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ಖುಷಿಯ ವಿಷಯ’ ಎನ್ನುತ್ತಾರೆ ಧೀರೆನ್.

‘ಕೆಲ ತಿಂಗಳುಗಳಿಂದ ಕಥೆಯ ಚರ್ಚೆ ನಡೆಯುತ್ತಿತ್ತು. ಕಥೆಯನ್ನು ಶಿವರಾಜ್‌ಕುಮಾರ್‌ ಮತ್ತು ಗೀತಾ ಶಿವರಾಜ್‌ಕುಮಾರ್ ಅವರಿಗೆ ಹೇಳಿದಾಗ, ಅವರಿಗೆ ತುಂಬಾ ಇಷ್ಟವಾಯಿತು. ಇಂತಹ ದೊಡ್ಡ ಬ್ಯಾನರ್‌ ಜೊತೆ ಕೆಲಸ ಮಾಡುವ ಆಸೆ ಎಷ್ಟೋ ನಿರ್ದೇಶಕರಿಗೆ ಇರುತ್ತದೆ. ನನ್ನ ಎರಡನೇ ಸಿನಿಮಾಗೆ ಈ ಅವಕಾಶ ಸಿಕ್ಕಿರುವುದಕ್ಕೆ ಬಹಳ ಸಂತೋಷವಿದೆ’ ಎಂದಿದ್ದಾರೆ.

‘ವೇದ’ ಸಿನಿಮಾ ಮೂಲಕ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದ ಗೀತಾ ಪಿಕ್ಚರ್ಸ್‌  ಬಳಿಕ ‘ಭೈರತಿ ರಣಗಲ್‌’ ನಿರ್ಮಾಣ ಮಾಡಿತ್ತು. ನ.14ರಂದು ಮಕ್ಕಳ ದಿನಾಚರಣೆ ಅಂಗವಾಗಿ ಶ್ರೀನಿ ನಿರ್ದೇಶನದ ಶಿವರಾಜ್‌ಕುಮಾರ್‌ ಅವರ ಹೊಸ ಸಿನಿಮಾ  ‘A for ಆನಂದ್‌’ ಸಿನಿಮಾವನ್ನು ಘೋಷಣೆ ಮಾಡಿತ್ತು.  ಇದೀಗ  ನಾಲ್ಕನೇ ಸಿನಿಮಾವನ್ನು ಗೀತಾ ಶಿವರಾಜ್‌ಕುಮಾರ್‌ ಘೋಷಿಸಿದ್ದಾರೆ.

ಚಿತ್ರದ ತಾಂತ್ರಿಕ ತಂಡದ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!