ಅಲ್ಲು ಅರ್ಜುನ್ ಸಿನಿಮಾ ‘ಪುಷ್ಪ 2’ ಎದುರು ಕನ್ನಡದ ‘ಧೀರ ಭಗತ್ ರಾಯ್’ ಸಿನಿಮಾ ಡಿಸೆಂಬರ್ 6ಕ್ಕೆ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.
ಕರ್ಣನ್ ಎಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪೊಲಿಟಿಕಲ್ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ಚಿತ್ರ ‘ಧೀರ ಭಗತ್ ರಾಯ್’ ಭೂಸುಧಾರಣೆ ಹಾಗೂ ಕೆಳ ವರ್ಗದ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕಥೆ ಒಳಗೊಂಡಿದೆ.
ಬಹುತೇಕ ಶೂಟಿಂಗ್ ಮುಗಿಸಿರೋ ಧೀರ ಭಗತ್ ರಾಯ್ ಚಿತ್ರತಂಡ ಪ್ರಮೋಷನ್ ಕೈಗೊಂಡಿದೆ. ಚಿತ್ರದ ನಾಯಕ, ನಿರ್ದೇಶಕ, ನಿರ್ಮಾಪಕ ತಮ್ಮ ಚಿತ್ರದ ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡರು.
ನಿರ್ದೇಶಕ ಕರ್ಣನ್, ‘ಭೂಸುಧಾರಣೆ ಬಗ್ಗೆ ‘ಧೀರ ಭಗತ್ ರಾಯ್’ ಸಿನಿಮಾ ಹೆಚ್ಚು ಮಾತನಾಡಲಿದೆ. ‘ಕಾಟೇರ’ ಸಿನಿಮಾ ರೀತಿಯ ಕಥೆಯನ್ನು ಹೇಳಲಾಗಿದೆ’ ಎಂದರು.
ನಾಯಕ ನಟ ರಾಕೇಶ್ ದಳವಾಯಿ , ‘ನಾನು 2014ರಿಂದ ರಂಗಭೂಮಿಯಲ್ಲಿ ನಾಟಕಗಳನ್ನು ಮಾಡುತ್ತಾ ಬಂದಿದ್ದೇನೆ. ಈ ಧೀರ ಭಗತ್ ರಾಯ್ ಪಾತ್ರಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಂಡು ಅಭಿನಯಿಸಿದ್ದೇನೆ. ಧೀರ ಭಗತ್ ರಾಯ್ ಯಾವ ದೊಡ್ಡ ಚಿತ್ರಕ್ಕೂ ಕಮ್ಮಿಯಿಲ್ಲ. ನಮ್ಮ ಸಿನಿಮಾದ ಕಂಟೆಂಟ್ ಮೇಲೆ ನಂಬಿಕೆ ಇದೆ. ಅದಕ್ಕೆ ಪುಷ್ಪ 2 ಸಿನಿಮಾ ಎದುರು ಬಿಡುಗಡೆ ಮಾಡ್ತಾ ಇರೋದು. ಯಾರಿಗೂ ಹೆದರೋ ಮಾತಿಲ್ಲ’ ಎಂದು ತಿಳಿಸಿದರು.
ನಿರ್ಮಾಪಕ ಪ್ರವೀಣ್ ಗೌಡ ಮಾತನಾಡಿ, ‘ಕರ್ಣನ್ ಚಿತ್ರಕ್ಕೆ ಕಥೆ, ಚಿತ್ರಕಥೆ ಒದಗಿಸುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ. ರಾಕೇಶ್ ದಳವಾಯಿ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡ್ತಾ ಇದ್ದಾರೆ. ನಾಯಕಿಯಾಗಿ ಸುಚರಿತಾ ಅನ್ನೋ ಹೊಸ ಮುಖ ಪರಿಚಯವಾಗ್ತಿದೆ. ಅಲ್ಲು ಅರ್ಜುನ್ ಸಿನಿಮಾ ಎದುರು ನಮ್ಮ ಚಿತ್ರವನ್ನು ಬಿಡಗಡೆ ಮಾಡುತ್ತಿದ್ದೇವೆ. ನಮ್ಮ ಚಿತ್ರದ ಮೇಲೆ ಇರುವ ನಂಬಿಕೆ ಅಂಥದ್ದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶರತ್ ಲೋಹಿತಾಶ್ವ, ನೀನಾಸಂ ಅಶ್ವಥ್, ಪ್ರವೀಣ್ ಗೌಡ ಹೆಚ್ ಸಿ, ಹರಿರಾಮ್, ಕೆ.ಎಮ್ ಸಂದೇಶ್, ಸುಧೀರ್ ಕುಮಾರ್ ಮುರೋಳಿ ತಾರಾಬಳಗ ಚಿತ್ರದಲ್ಲಿದೆ. ವೈಟ್ ಲೋಟಸ್ ಎಂಟರ್ಟೈನ್ಮೆಂಟ್ ಮತ್ತು ಶ್ರೀ ಓಂ ಸಿನಿ ಎಂಟ್ರಟೈನರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ.
ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ಸೆಲ್ಪಂ ಜಾನ್ ಛಾಯಾಗ್ರಹಣ, ಎನ್.ಎಂ ವಿಶ್ವ ಸಂಕಲನ ಮಾಡಿದ್ದಾರೆ.
Be the first to comment