ಧೀರ ಭಗತ್ ರಾಯ್

ಭೂಸುಧಾರಣಾ ಕಾಯ್ದೆಯ ಹಿನ್ನೆಲೆಯಲ್ಲಿ ಬಿಚ್ಚಿಟ್ಟ ಕಹಿ ಸತ್ಯ

ಚಿತ್ರ: ಧೀರ ಭಗತ್ ರಾಯ್
ನಿರ್ದೇಶನ : ಕರ್ಣನ್ ಎಸ್
ನಿರ್ಮಾಪಕರು : ಪ್ರವೀಣ್ ಹಡಗೂರು , ಅಶೋಕ
ತಾರಾಗಣ : ರಾಕೇಶ್ ದಳವಾಯಿ, ಸುಚರಿತಾ, ಶರತ್ ಲೋಹಿತಾಶ್ವ, ನೀನಾಸಂ ‌ಅಶ್ವತ್, ಪ್ರವೀಣ್ ಮುಂತಾದವರು.
ರೇಟಿಂಗ್: 3.5/5

ರಾಕೇಶ್ ದಳವಾಯಿ ಅಭಿನಯದ ‘ಧೀರ ಭಗತ್ ರಾಯ್’ ಸಿನಿಮಾ ಭೂಸುಧಾರಣಾ ಕಾಯ್ದೆಯಿಂದಾಗಿ ಅನ್ಯಾಯಕ್ಕೊಳಗಾದವರ ಹೋರಾಟದ ಕಹಿ ಕಥೆಯನ್ನು ಬಿಚ್ಚಿಟ್ಟಿದೆ. ಈ ಚಿತ್ರವು ದಶಕಗಳ ಹಿಂದಿನ ಕಾಲವನ್ನು ಅತ್ಯಂತ ನೈಜವಾಗಿ ಬಿಂಬಿಸಿದ್ದು, ನವಿರಾದ ಪ್ರೀತಿ, ತಂದೆಯ-ಮಗನ ಬಾಂಧವ್ಯ, ಆ್ಯಕ್ಷನ್ ಅಬ್ಬರಗಳನ್ನು ಇಲ್ಲಿ ನೋಡಭಹುದು. ಮೊದಲರ್ಧ ಚಳವಳಿಯ ಇತಿಹಾಸದ ಪರಿಚಯದಲ್ಲಿಯೇ ಮುಗಿಯುತ್ತದೆ. ನೋಡುಗರನ್ನು ಆ ಕಾಲಕ್ಕೆ ಕರೆದೊಯ್ಯುತ್ತದೆ.

ದ್ವಿತೀಯಾರ್ಧದಲ್ಲಿಯೇ ‘ಧೀರ ಭಗತ್ ರಾಯ್’ನ ನೈಜ ಹೋರಾಟ ಆರಂಭವಾಗುತ್ತದೆ. ನಿರ್ದೇಶಕರು ಅಧ್ಯಯನ ನಡೆಸಿ ಒಂದು ಪರಂಪರೆಯ ಚಳವಳಿ ಹಾಗೂ ನೆಲ ಮೂಲದ ಕಥೆ ಹೇಳುವಲ್ಲಿ ಯಶಸ್ವಿಯಾಗಿದ್ದಾರೆ.

ಸಿನಿಮಾವು ಭೂಸುಧಾರಣಾ ಕಾಯ್ದೆಯ ಹಿಂದಿನ ರಾಜಕೀಯ, ಅದರ ಅನುಷ್ಠಾನದಲ್ಲಿ ಆದ ಕಷ್ಟ ನಷ್ಟಗಳನ್ನು ವಿವರವಾಗಿ ಚಿತ್ರಿಸುತ್ತದೆ. ನರಗುಂದ ಎಂಬ ಊರಿನ ಹಿನ್ನೆಲೆಯಲ್ಲಿ ದೇಶದ ಆ ಕಾಲದ ರಾಜಕೀಯವನ್ನು ಪ್ರತಿಬಿಂಬಿಸುವ ಈ ಚಿತ್ರ, ಎಷ್ಟೋ ವರ್ಷಗಳಿಂದ ಉಳುಮೆ ಮಾಡುತ್ತಾ ತುತ್ತು ಕೂಳಿಗೂ ಕಷ್ಟ ಪಡುವ ದಮನಿತ ವರ್ಗ ಮತ್ತು ಅವರ ಮೇಲೆ ಸದಾ ಸವಾರಿ ಮಾಡುವ ಅಧಿಕಾರಶಾಹಿಗಳ ನಡುವಿನ ಹೋರಾಟವನ್ನು ಕೇಂದ್ರವಾಗಿರಿಸಿಕೊಂಡಿದೆ.

ರಾಕೇಶ್ ದಳವಾಯಿ ನಾಯಕನಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಭೂಮಾಲೀಕನಾಗಿ ಬಡವರ ಕಣ್ಣಲ್ಲಿ ರಕ್ತ ಹರಿಸುವ ಖಳನಾಯಕನ ಪಾತ್ರವನ್ನು ಶರತ್ ಲೋಹಿತಾಶ್ವ ಅವರು ಅದ್ಭುತವಾಗಿ ನಿರ್ವಹಿಸಿದ್ದಾರೆ. ಮತ್ತು ಖಡಕ್ ಪೋಲಿಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಪ್ರವೀಣ್ ಹಡಗೂರು ನೈಜ್ಯವಾಗಿ ಅಭಿನಯಿಸಿದ್ದಾರೆ. ಎಂ.ಕೆ.ಮಠ, ನೀನಾಸಂ ಅಶ್ವಥ್ ಪಾತ್ರಗಳು ಗಮನ ಸೆಳೆಯುತ್ತವೆ.

ಕಾನೂನು, ಸಂವಿಧಾನ ಹಾಗೂ ರೈತರ ಬದುಕಿನ ಬಗ್ಗೆ ಅರಿವು ಮೂಡಿಸುವಂತಹ ಚಿತ್ರದ ಸಂಭಾಷಣೆ ಅದ್ಬುತ ವಾಗಿದೆ. ಎರಡೂವರೆ ಗಂಟೆಗಳ ಈ ಚಿತ್ರದಲ್ಲಿ ನಾಯಕನ ಡೈಲಾಗ್‌ಗಳು ಮತ್ತು ಬ್ಯಾಗ್ರೌಂಡ್ ಮ್ಯೂಸಿಕ್‌ಗಳು ಸಿನಿಮಾಗೆ ಮತ್ತಷ್ಟು ಬಲ ತಂದಿವೆ.

ಒಟ್ಟಾರೆಯಾಗಿ ಧೀರ ಭಗತ್ ರಾಯ್ ಸಿನಿಮಾ ಕೇವಲ ಒಂದು ಚಿತ್ರವಲ್ಲ, ಇದು ಒಂದು ಸಂದೇಶ. ಭೂಮಿ ಮತ್ತು ನ್ಯಾಯಕ್ಕಾಗಿ ಹೋರಾಡಿದವರ ಕಥೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!