MONSTER Movie : ನಾಲ್ಕು ‌ತಲೆಮಾರಿನ ಕಥೆ ಹೇಳುವ “ಮಾನ್ ಸ್ಟರ್” ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ

ಪುಟ್ಟರಾಜ ರೆಡ್ಡಿ ಅವರ ನಿರ್ಮಾಣದ, ಆರನ್ ಕಾರ್ತಿಕ್ ವೆಂಕಟೇಶ್ ಕಥೆ, ಚಿತ್ರಕಥೆ ಬರೆದು ಸಂಗೀತ ‌ಸಂಯೋಜಿಸುವುದರೊಂದಿಗೆ ನಿರ್ದೇಶನವನ್ನು ಮಾಡಿರುವ “ಮಾನ್ ಸ್ಟರ್” ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ ಸಮಾರಂಭ ಇತ್ತೀಚಿಗೆ ಅದ್ದೂರಿಯಾಗಿ ನೆರವೇರಿತು. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್, ಮುನೇಗೌಡ, ನಿರ್ಮಾಪಕ ಹರೀಶ್, ನಟ ರಕ್ಷಕ್ ಬುಲೆಟ್ , ಸಿರಿ ಮ್ಯೂಸಿಕ್ ಸಿರಿ ಚಿಕ್ಕಣ್ಣ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹಾಡು‌ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ಇದು ನಾನು ಸಂಗೀತ ಸಂಯೋಜಿಸುತ್ತಿರುವ 57 ನೇ ಚಿತ್ರ ಹಾಗೂ ನಿರ್ದೇಶಿಸಿರುವ ಆರನೇ ಚಿತ್ರ ಎಂದು ಮಾತನಾಡಿದ ಆರನ್ ಕಾರ್ತಿಕ್ ವೆಂಕಟೇಶ್, ಈ ಚಿತ್ರದಲ್ಲಿ ನಾಲ್ಕು ತಲೆಮಾರುಗಳ ಕಥೆ ತೋರಿಸಲಾಗಿದೆ.‌ ಆಕ್ಷನ್ ಥ್ರಿಲ್ಲರ್ ಜಾನರ್ ನ ಈ ಚಿತ್ರದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುವ ಸಾಮಾಜಿಕ ಕಳಕಳಿಯುಳ್ಳ ಅಂಶ ಸಹ ಇದೆ. ಚಿತ್ರದಲ್ಲಿ ಮೂರು ನಾಯಕರಿದ್ದಾರೆ. ಥ್ರಿಲ್ಲರ್ ಮಂಜು, ಧರ್ಮ ಕೀರ್ತಿರಾಜ್ ಹಾಗೂ ಪವನ್ ಎಸ್ ನಾರಾಯಣ್ ನಾಯಕರಾಗಿ ಅಭಿನಯಿಸಿದ್ದಾರೆ. ನಿರ್ಮಾಪಕರ ಪುತ್ರ ಸಂತೋಷ್ ರೆಡ್ಡಿ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್, ಯತಿರಾಜ್, ಕುರಿ ಬಾಂಡ್ ರಂಗ, ಯಶ್ವಿಕ , ವಿಕ್ಟರಿ ವಾಸು, ಗಣೇಶ್ ರಾವ್, ಸಂಗೀತ, ದುಬೈ ರಫಿಕ್, ರಾಬರ್ಟ್ , ನವಾಜ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. . ಚಿತ್ರೀಕರಣ ಪೂರ್ಣವಾಗಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಚಿತ್ರದಲ್ಲಿ ಖ್ಯಾತ ಗಾಯಕರು ಹಾಡಿರುವ ಏಳು ಹಾಡುಗಳಿದೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ ಎಂದರು.

ಇದು ನನ್ನ ಮೊದಲ ನಿರ್ಮಾಣದ ಚಿತ್ರ. ನಾನು ಅಷ್ಟು ಓದಿದವನಲ್ಲ. ಆದರೆ ಇಂದು ಕಷ್ಟಪಟ್ಟು ಸಿನಿಮಾ ನಿರ್ಮಾಣ ಮಾಡುವ ಹಂತಕ್ಕೆ ತಲುಪಿದ್ದೇನೆ. ಈ ಚಿತ್ರದ ಮೂಲಕ ನನ್ನ ಮಗ ಸಂತೋಷ್ ರೆಡ್ಡಿ ಚಿತ್ರರಂಗ ಪ್ರವೇಶಿಸುತ್ತಿದ್ದಾನೆ.‌ ಅವನಿಗೆ ಹಾಗೂ ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಪುಟ್ಟರಾಜ ರೆಡ್ಡಿ.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಚಿತ್ರ ಚೆನ್ನಾಗಿ ಮೂಡಿಬಂದಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ನಟ ಧರ್ಮ ಕೀರ್ತಿರಾಜ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಥ್ರಿಲ್ಲರ್ ಮಂಜು, ಸಂತೋಷ್ ರೆಡ್ಡಿ, ರಾಜ್ ಬಹದ್ದೂರ್, ಗಣೇಶ್ ರಾವ್, ಸಂಗೀತ, ನವಾಜ್ ಮುಂತಾದ ಕಲಾವಿದರು ಹಾಗೂ ತಂತ್ರಜ್ಞರು “ಮಾನ್ ಸ್ಟರ್” ಬಗ್ಗೆ ಮಾಹಿತಿ ನೀಡಿದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!