‘ಸು ಫ್ರಮ್ ಸೋ’ ಗೆ ಪರ ಭಾಷೆಗಳಿಂದ ಬೇಡಿಕೆ

ಲೈಟರ್ ಬುದ್ಧ ಫಿಲ್ಮ್ಸ್ ಅಡಿಯಲ್ಲಿ ರಾಜ್ ಬಿ ಶೆಟ್ಟಿ ನಿರ್ಮಿಸಿ, ಜೆಪಿ ತುಮಿನಾಡ್ ನಿರ್ದೇಶಿಸಿದ ‘ಸು ಫ್ರಮ್ ಸೋ’ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಬೇರೆ ಭಾಷೆಗಳಿಂದ ಬೇಡಿಕೆ ಹೆಚ್ಚುತ್ತಿದೆ. 

‘ಸು ಫ್ರಮ್ ಸೋ’ ಈಗ ಕರ್ನಾಟಕದ ಗಡಿಗಳನ್ನು ಮೀರಿ ಪ್ರದರ್ಶನಗೊಳ್ಳುತ್ತಿದೆ. ಆಗಸ್ಟ್ 1 ರಂದು ಈ ಚಿತ್ರ ಕೇರಳದಲ್ಲಿ ಅದೇ ಹೆಸರಿನಲ್ಲಿ ಬಿಡುಗಡೆಯಾಗಲಿದೆ. ನಟ ದುಲ್ಕರ್ ಸಲ್ಮಾನ್ ಅವರ ಬೆಂಬಲದೊಂದಿಗೆ, ಅವರ ವೇಫೇರರ್ ಫಿಲ್ಮ್ಸ್ ಚಿತ್ರ ವಿತರಣೆ ಮಾಡಲಿದೆ.

ಕಾಂತಾರ, ಕೆಜಿಎಫ್ ಮತ್ತು ಪುಷ್ಪದಂತಹ ದಕ್ಷಿಣ ಭಾರತದ ಚಿತ್ರಗಳನ್ನು ಬಿಡುಗಡೆ ಮಾಡಿದ ಅನಿಲ್ ಥಡಾನಿಯವರ ಎಎ ಫಿಲ್ಮ್ಸ್, ಉತ್ತರ ಭಾರತದಾದ್ಯಂತ ಸು ಫ್ರಮ್ ಸೋ ಕನ್ನಡ ಆವೃತ್ತಿಯನ್ನು ವಿತರಿಸಲು ಸಜ್ಜಾಗಿದೆ. ಮುಂಬೈ, ಪುಣೆ, ಚೆನ್ನೈ, ಹೈದರಾಬಾದ್, ದೆಹಲಿ ಮತ್ತು ಪಂಜಾಬ್‌ನಂತಹ ನಗರಗಳಲ್ಲಿ ಈಗಾಗಲೇ ಸೀಮಿತ ಪ್ರದರ್ಶನಗಳನ್ನು ಕಾಣುತ್ತಿದ್ದು, ಚಿತ್ರಮಂದಿರಗಳು ಹೌಸ್‌ಫುಲ್ ಆಗುತ್ತಿವೆ.

‘ಸು ಫ್ರಮ್ ಸೋ’ ಚಿತ್ರದ ತಮಿಳು ಮತ್ತು ತೆಲುಗು ಡಬ್ಬಿಂಗ್ ಆವೃತ್ತಿಗಳಿಗೆ  ಬೇಡಿಕೆ ಹೆಚ್ಚುತ್ತಿದೆ. ಸದ್ಯ ಡಬ್ಬಿಂಗ್ ಪ್ರಗತಿಯಲ್ಲಿದೆ.  ಫಾರ್ಸ್ ಫಿಲ್ಮ್ ಮೂಲಕ ಸು ಫ್ರಮ್ ಸೋ ಚಿತ್ರ ಆಗಸ್ಟ್ 1 ರಿಂದ ಯುಎಸ್, ಆಸ್ಟ್ರೇಲಿಯಾ, ದುಬೈ ಮತ್ತು ಇತರ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.

‘ಸು ಫ್ರಮ್ ಸೋ’ ಚಿತ್ರ ಅತ್ಯಂತ ಬೇಡಿಕೆಯ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರ  ಮೂರು ದಿನಗಳಲ್ಲಿ7 ಕೋಟಿ ₹ ಗಳಿಸುವಲ್ಲಿ ಯಶಸ್ವಿಯಾಗಿದೆ. ಚಿತ್ರ  ದಿನದಿಂದ ದಿನಕ್ಕೆ ಹೆಚ್ಚಿನ ಬೇಡಿಕೆ ಪಡೆಯುತ್ತಿದ್ದು, ತನ್ನ ಶೋಗಳನ್ನು ವಿಸ್ತರಿಸಿಕೊಳ್ಳುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!