ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದೆ.
‘ಫೈರ್’, ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ನಿವೃತ್ತ ನ್ಯಾಯಾಧೀಶರ ಕಮಿಟಿ ರಚಿಸಿ, ವ್ಯವಸ್ಥಿತವಾಗಿ ತನಿಖೆ ಆಗಬೇಕು. ಮಹಿಳೆಯರು ಕನ್ನಡ ಚಿತ್ರರಂಗದಲ್ಲಿ ಆರೋಗ್ಯಕರ ಹಾಗೂ ಸಮಾನವಾಗಿ ಕೆಲಸ ಮಾಡುವಂತೆ ನಿಯಮಗಳನ್ನು ತರುವಂತೆ ಆಗ್ರಹಿಸಿದೆ.
ಫೈರ್‌ನ ಅಧ್ಯಕ್ಷೆ ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಅಹಿಂಸಾರಿಂದ ಹಿಡಿದು ರಮ್ಯಾ, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್, ಪೂಜಾ ಗಾಂಧಿ, ಚೈತ್ರಾ ಜೆ ಆಚಾರ್, ಧನ್ಯಾ ರಾಮ್‌ಕುಮಾರ್, ಸಂಯುಕ್ತ ಹೆಗಡೆ, ಶ್ರದ್ಧ ಶ್ರೀನಾಥ್, ಕಿಶೋರ್, ನಿಶ್ವಿಕಾ ನಾಯ್ಡು, ವಿನಯ್ ರಾಜ್‌ಕುಮಾರ್ ಸೇರಿದಂತೆ 153 ಮಂದಿ ಅರ್ಜಿಗೆ ಸಹಿ ಹಾಕಿದ್ದಾರೆ.
2017ರಲ್ಲಿ ಸ್ಥಾಪನೆಯಾದ ‘ಫೈರ್’ ಆಂತರಿಕ ದೂರು ಸಮಿತಿ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಲೈಂಗಿಕ ಕಿರುಕುಳ ಹಾಗೂ ಇತರ ಸಮಸ್ಯೆಗಳು ಎದುರಾದರೆ ಅದರ ವಿರುದ್ಧ ಹೋರಾಡುವ ಕಮಿಟಿ ಇದಾಗಿದೆ. ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ವರದಿ ಸಂಚಲನ ಸೃಷ್ಟಿಸಿದ ಬಳಿಕ ‘ಫೈರ್’ ಮತ್ತೆ ಕಾರ್ಯೋನ್ಮುಖವಾಗಿದೆ.
ಮಲಯಾಳಂ ಚಿತ್ರರಂಗದ ಕಾಮಕಾಂಡದ ಬಗ್ಗೆ ನ್ಯಾಯಮೂರ್ತಿ ಹೇಮಾ ಕಮಿಟಿ ವರದಿ ಮಾಡಿತ್ತು.ಕೆಲವು ನಟಿಯರು ಮಾಲಿವುಡ್‌ನ ನಟರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಇದೇ ರೀತಿ ಕಮಿಟಿ ರಚನೆಯಾಗಬೇಕು ಎಂದು ಬೇರೆ ಚಿತ್ರರಂಗಗಳು ಪಟ್ಟು ಹಿಡಿದಿವೆ. ಕೆಲವು ದಿನಗಳ ಹಿಂದಷ್ಟೇ ತೆಲುಗು ಚಿತ್ರರಂಗದಲ್ಲೂ ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ ಹಾಗೂ ಇತರೆ ಸಮಸ್ಯೆಗಳನ್ನು ಅಧ್ಯಯನ ಆಗಬೇಕು ಎಂದು ಟಾಲಿವುಡ್‌ನ ಹಲವು ಸೆಲಬ್ರಿಟಿಗಳು ತೆಲಂಗಾಣ ಸರ್ಕಾರಕ್ಕೆ ಒತ್ತಡ ಹಾಕಿದ್ದರು. ಈಗ ಕನ್ನಡ ಚಿತ್ರರಂಗದಲ್ಲೂ ಕೂಗು ಕೇಳಿ ಬರುತ್ತಿದೆ.
Be the first to comment