ಏಕರೂಪ ಟಿಕೆಟ್‍ ದರ ನಿಗದಿಪಡಿಸಲು ಮನವಿ

ರಭಾಷೆಯ ದೊಡ್ಡ ಚಿತ್ರಗಳು ಬಿಡುಗಡೆಯಾಗುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ಏಕರೂಪ ಟಿಕೆಟ್‍ ದರ ನಿಗದಿಪಡಿಸಲು ಚಿತ್ರರಂಗ ಮನವಿ ಮಾಡಿದೆ.

ಇತ್ತೀಚೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‍.ಎಂ. ಸುರೇಶ್‍, ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಮುಂತಾದವರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ, ಟಿಕೆಟ್‍ ದರ ಕಡಿಮೆ ಮಾಡುವುದಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ  ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗಿದೆ.

ಪರಭಾಷೆಯ ಚಿತ್ರಗಳ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ದುಬಾರಿ ಬೆಲೆ ನಿಗದಿಪಡಿಸಲಾಗುತ್ತಿದೆ. ರಜನಿಕಾಂತ್, ಪ್ರಭಾಸ್‍, ವಿಜಯ್‍ ಮುಂತಾದ ಸ್ಟಾರ್ ಚಿತ್ರಗಳು ಬಿಡುಗಡೆಯಾಗುವ ಸಂದರ್ಭ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆ ವಿಪರೀತ ಏರಿಸಲಾಗುತ್ತದೆ. ಬೇರೆ ರಾಜ್ಯಗಳಲ್ಲಿ ಟಿಕೆಟ್‍ ಬೆಲೆ ಗರಿಷ್ಠ 150ರಿಂದ 200 ರೂಗಳವರೆಗೆ ಇದ್ದರೆ, ಬೆಂಗಳೂರಿನಲ್ಲಿ ಟಿಕೆಟ್‍ ದರ 1500 ರೂ.ವರೆಗೂ ಏರಿಸಲಾಗುತ್ತಿದೆ.

ಸಿದ್ದರಾಮಯ್ಯ  ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದಾಗ  200 ರೂ. ಟಿಕೆಟ್‍ ನಿಗದಿ ಮಾಡಿ ಆದೇಶ ಹೊರಡಿಸಿದ್ದರು.  ಈ ಆದೇಶ ಗೃಹ ಇಲಾಖೆಯಿಂದ ಬರುವ ಬದಲು ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯದಿಂದ ಬಂದಿತ್ತು. ಈ ಸಂಬಂಧ ಚಿತ್ರಮಂದಿರಗಳ ಮಾಲೀಕರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದರು. ಆ ನಂತರ ಈ ವಿಷಯ ನೆನೆಗುದಿಗೆ ಬಿದ್ದಿತ್ತು. ಈಗ ಮತ್ತೊಮ್ಮೆ ಏಕರೂಪ ಟಿಕೆಟ್‍ ದರ ವಿಷಯ ಮುನ್ನೆಲೆಗೆ ಬಂದಿದೆ.

ಚಿತ್ರರಂಗದ ಕೆಲವು ಮಂದಿ ಕಳೆದ ಕೆಲವು ದಿನಗಳಿಂದ ವಾಣಿಜ್ಯ ಮಂಡಳಿಯೆದುರು  ಈ ಸಂಬಂಧ ಧರಣಿ ಮಾಡುತ್ತಿದ್ದಾರೆ. ನ. 15 ರೊಳಗಾಗಿ ಆದೇಶ ಮಾಡದೇ ಹೋದರೆ ರಾಜ್ಯವ್ಯಾಪಿ ಹೋರಾಟ ಮಾಡುವುದಾಗಿ ಚಿತ್ರರಂಗ ಎಚ್ಚರಿಸಿದೆ.

‘ಪುಷ್ಪ 2′ ಚಿತ್ರಕ್ಕೆ 200 ರೂ.ಗಳಿಗಿಂತ ಜಾಸ್ತಿ ದರ ಇಟ್ಟರೆ, ಚಿತ್ರಮಂದಿರರಗಳಿಗೆ ಮುತ್ತಿಗೆ ಹಾಕಲಾಗುತ್ತದೆ’ ಎಂದು  ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಎಚ್ಚರಿಕೆ ನೀಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!