ಎಂ.ಜಿ.ಎನ್. ಪ್ರೊಡಕ್ಷನ್ ಲಾಂಛನದಲ್ಲಿ ಬಸವರಾಜ್ ಎಸ್ ನಂದಿ, ದೇವು ಹಾಸನ್ ಸೇರಿ ನಿರ್ಮಿಸುತ್ತಿರುವ ಚಿತ್ರ ‘ಡಿಸೆಂಬರ್ 24’. ನಾಗರಾಜ್ ಎಂ.ಜಿ.ಗೌಡ ನಿರ್ದೇಶನದ ಮೊದಲ ಸಿನಿಮಾ ಇದು. ಕಳೆದ ಭಾನುವಾರ ನಾಗರಬಾವಿಯ ಕುವೆಂಪು ರಂಗಮಂದಿರ ಮೈದಾನದಲ್ಲಿ ನಡೆದ ಅದ್ಧೂರಿ ಮುಹೂರ್ತ ಸಮಾರಂಭಕ್ಕೆ ಕುಣಿಗಲ್ ಜೆ.ಡಿ.ಎಸ್ ಮುಖಂಡ ಡಿ. ನಾಗರಾಜಯ್ಯ ಅವರ ಪುತ್ರ ಜಗದೀಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಿರ್ದೇಶಕ, ಗೀತಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರೆ, ಅಯೋಗ್ಯ ಚಿತ್ರದ ನಿರ್ದೇಶಕ ಮಹೇಶ್ ಕುಮಾರ್ ಕ್ಯಾಮೆರಾ ಚಾಲನೆ ಮಾಡಿದರು.
ಭಾ.ಮ ಹರೀಶ್, ಭಾ.ಮ. ಗಿರೀಶ್, ಪ್ರಥಮ್ ಸೇರಿಂದಂತೆ ಚಿತ್ರರಂಗದ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿದ್ದರು.
ಸಸ್ಪೆನ್ಸ್, ಥ್ರಿಲ್ಲರ್, ಹಾರರ್, ಲವ್, ಸೆಂಟಿಮೆಂಟು – ಹೀಗೆ ಎಲ್ಲ ಅಂಶಗಳನ್ನು ಒಳಗೊಂಡಿರುವ ‘ಡಿಸೆಂಬರ್ 24’ ಚಿತ್ರದ ಕಥೆಯನ್ನು ಮೆಡಿಕಲ್ ರಿಸರ್ಚ್‍ವೊಂದರ ಸುತ್ತ ಹೆಣೆಯಲಾಗಿದೆ. ‘ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗದಲ್ಲಿ ಒಂದು ಘಟನೆ ನಡೆಯಿತು. ನವಜಾತ ಶಿಶುವೊಂದು ದಿಢೀರನೆ ಅಸುನೀಗಿತ್ತು. ಕಾರಣ ಕೇಳಿದಾಗ ವೈದ್ಯರು ‘ಉಸಿರಾಟದ ಸಮಸ್ಯೆಯಾಗಿ ಮಗು ಪ್ರಾಣ ಬಿಟ್ಟಿದೆ’ ಎಂದು ಕೈ ಚೆಲ್ಲಿದ್ದರು. ಅದಾದ ಮೇಲೂ ಅನೇಕ ಕಡೆ ಇಂಥದ್ದೇ ಘಟನೆ ಮರುಕಳಿಸಿದೆ. ಹುಟ್ಟಿದ ಮಕ್ಕಳು ಜೀವ ಬಿಡುವ ಪ್ರಕರಣಗಳು ಯಾಕೆ ಹೆಚ್ಚಾಗುತ್ತಿವೆ? ಇದಕ್ಕೆ ವೈದ್ಯರು ಹೇಳುವ ಒಂದೇ ಕಾರಣ ವೆಂಟಿಲೇಷನ್ ಸಮಸ್ಯೆ ಅನ್ನೋದು. ಈ ಸಮಸ್ಯೆಗೆ ಕಾರಣ ಹುಡುಕೋದು ನಮ್ಮ ಚಿತ್ರದ ಮುಖ್ಯ ಉದ್ದೇಶ. ಔಷಧವೊಂದರ ಸಂಶೋಧನೆಗೆ ವೈದ್ಯಕೀಯ ವಿದ್ಯಾರ್ಥಿಗಳು ಕಾಡಿಗೆ ತೆರಳಿರುತ್ತಾರೆ. ಗಿಡಮೂಲಿಕೆಗಳನ್ನು ಹುಡುಕಲು ಹೊರಟ ಅವರ ಮುಂದೆ ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಮತ್ತೆ ಅವರು ಕಾಡಿನಿಂದ ವಾಪಾಸು ಬರುತ್ತಾರಾ? ಔಷಧ ಕಂಡು ಹಿಡಿಯುತ್ತಾರಾ? ಅವರಿಗೆ ಎದುರಾಗುವ ಸಮಸ್ಯೆ ಯಾವುದು? ಹೀಗೆ ಕ್ಷಣ ಕ್ಷಣಕ್ಕೂ ರೋಚಕ ತಿರುವುಗಳ ಮೂಲಕ ‘ಡಿಸೆಂಬರ್ 24’ನ್ನು ರೂಪಿಸಲಾಗುತ್ತಿದೆ.ಹುಲಿಯೂರು ದುರ್ಗ, ಮಾಗಡಿ, ಚಿಕ್ಕಮಗಳೂರು, ಯಲ್ಲಾಪುರದ ಪ್ರಸಿದ್ಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ.’’ ಅನ್ನೋದು ನಿರ್ದೇಶಕ ನಾಗರಾಜ್ ಎಂ.ಜಿ.ಗೌಡ ಅವರ ವಿವರಣೆ. ಮೂಲತಃ ದಾವಣಗೆರೆಯವರಾದ ನಾಯಕಿ ಕಾವ್ಯ ಈ ಚಿತ್ರದ ಕಥೆಯನ್ನು ಅಪಾರವಾಗಿ ಇಷ್ಟಪಟ್ಟು ಒಪ್ಪಿದ್ದಾರಂತೆ. ಈಗಾಗಲೇ ಕಿರುತೆರೆಯ ಸೀತಾವಲ್ಲಭ ಧಾರಾವಾಹಿಯಲ್ಲಿ ನಟಿಸಿ ಹೆಸರು ಮಾಡಿರುವ ಕಾವ್ಯಾ ಚೌಕಾಬಾರ ಸೇರಿದಂತೆ ಇನ್ನೂ ಹೆಸರಿಡದ ಮತ್ತೊಂದು ಚಿತ್ರದಲ್ಲೂ ನಟಿಸುತ್ತಿದ್ದಾರೆ. ‘ಡಿಸೆಂಬರ್ 24’ ಇವರ ಪಾಲಿಗೆ ಮೂರನೇ ಸಿನಿಮಾ. ಇನ್ನು, ಬಿಜಾಪುರದಿಂದ ಬಂದಿರುವ ಅಪ್ಪು ಬಡಿಗೇರ್ ಈ ಚಿತ್ರಕ್ಕೆ ಆಯ್ಕೆಯಾಗಿರೋದು ಆಡಿಷನ್ ಮೂಲಕ. ಸಾಕಷ್ಟು ಜನ ಆಕಾಂಕ್ಷಿಗಳ ನಡುವೆ ಸೆಲೆಕ್ಟ್ ಆಗಿರೋದು ಮಾತ್ರ ಅಪ್ಪು ಬಡಿಗೇರ್. ಹಾಗಂತ ಇದು ಇವರ ಮೊದ ಚಿತ್ರವಲ್ಲ. ತನಿಖೆ, ಪಾಗಲ್ ಪ್ರೇಮಿ, ರಾಜಾದಿರಾಜ ಸಿನಿಮಾಗಳಲ್ಲಿ ಅಪ್ಪು ಬಡಿಗೇರ್ ಪಾತ್ರ ನಿರ್ವಹಿಸಿದ್ದಾರೆ. ‘ಡಿಸೆಂಬರ್ 24’ ಚಿತ್ರದಲ್ಲಿ ಇನ್ನೂ ಅನೇಕ ವಿಶೇಷತೆಗಳಿವೆ. ಎಲ್ಲರಿಗೂ ತಿಳಿದಿರುವ ಪ್ರಾಣಿಯೊಂದು ಈ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಲಿದೆ. ಅದು ಯಾವ ಪ್ರಾಣಿ? ಯಾವ ರೂಪದಲ್ಲಿ ಎದುರಾಗುತ್ತದೆ ಅನ್ನೋದೆಲ್ಲಾ ಸದ್ಯಕ್ಕೆ ಸಸ್ಪೆನ್ಸ್!
ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಕಳೆದ ಒಂದೂವರೆ ವರ್ಷಗಳಿಂದ ಸಾಕಷ್ಟು ಜನ ವೈದ್ಯರನ್ನು ಭೇಟಿಯಾಗಿ, ಅವರನ್ನು ಸಂದರ್ಶನ ಮಾಡಿ ತಿಳಿದುಕೊಂಡು, ಸಂಶೋಧನೆ ನಡೆಸಿ ಸಿದ್ದಪಡಿಸಿರುವ ಕಥೆ ‘ಡಿಸೆಂಬರ್ 24’ರದ್ದು. ಯಾಕೆ `ಡಿಸೆಂಬರ್ 24’ ಎಂದು ಹೆಸರಿಡಲಾಗಿದೆ ಅನ್ನೋದು ಕೂಡಾ ಸಿನಿಮಾದ ಕ್ಲೈಮ್ಯಾಕ್ಸಿನಲ್ಲಿ ಅನಾವರಣಗೊಳ್ಳಲಿದೆ. ಡಿಸೆಂಬರ್ 24’ ಚಿತ್ರದ ತಾರಾಗಣದಲ್ಲಿ ಅಪ್ಪು ಬಡಿಗೇರ, ಕವ್ಯ, vರಘು ಶೆಟ್ಟಿ, ಜಗದೀಶ್ ಹೆಚ್.ಜಿ. ದೊಡ್ಡಿ, ಆನಂದ್ ಪಟೇಲ್, ಹುಲಿಕಟ್ಟೆ ಗೌಡ, ರೋಶನ್ ಚೊಟ್ಟಾಳಿಯಮ್ಮಂಡ, ಮಂಡ್ಯ ಶಿವು, ಕಿರಣ್ ಜಿ.ಎಸ್., ಕುಮಾರ್ ಎಸ್ ಮುಂತಾದವರ ತಾರಾಗಣವಿದೆ. ನಾಗರಾಜ್ ಎಂ.ಜಿ. ಗೌಡ ಕಥೆ, ಚಿತ್ರಕಥೆ, ನಿರ್ದೇಶನ, ನಾಲ್ಕು ಹಾಡುಗಳಿಗೆ ಪ್ರವೀಣ್ ನಿಕೇತನ್ ಸಂಗೀತ, ಬಸವರಾಜ್ ಎಂ. ನಂದಿ ಛಾಯಾಗ್ರಹಣ, ಸುರೇಶ್ ಡಿ.ಹೆಚ್. ಸಂಕಲನ, ಸಿರಿ ವೈ.ಎಸ್.ಆರ್. ಸಂಭಾಷಣೆ ರಚಿಸಿದ್ದಾರೆ.
Pingback: buy dumps