ನೈಜ ಘಟನೆ ಆಧಾರಿತ ರಾಂಚಿ ಚಿತ್ರ ಡಿಸೆಂಬರ್ 1ರಂದು ತೆರೆಗೆ ಬರಲಿದೆ.
ಈಗಾಗಲೇ ಚಿತ್ರದ ಟೀಸರ್ ಕುತೂಹಲವನ್ನು ಹುಟ್ಟು ಹಾಕಿದೆ. ನಿರ್ದೇಶಕರು ತಮಗೆ ಆಗಿರುವ ಮೋಸದ ಕರೆಯ ಅನುಭವವನ್ನು ತೆರೆಯ ಮೇಲೆ ತರುವ ಯತ್ನವನ್ನು ಮಾಡಿದ್ದಾರೆ.
ಈ ಚಿತ್ರವನ್ನು ರುದ್ರಾನಂದ ಆರ್ ಎನ್ ಹಾಗೂ ಅರುಣ್ ಕುಮಾರ್ ಎನ್ ಅವರು ನಿರ್ಮಿಸಿದ್ದಾರೆ. ಶಶಿಕಾಂತ್ ಗಟ್ಟಿ ನಿರ್ದೇಶನ ಚಿತ್ರಕ್ಕಿದೆ.
ಚಿತ್ರದ ಕಥೆಯ ಬಗ್ಗೆ ಮಾತನಾಡಿರುವ ನಿರ್ದೇಶಕರು, ನಾನು ಐಪಿಸಿ ಸೆಕ್ಷನ್ 300 ಎನ್ನುವ ಸಿನಿಮಾ ನಿರ್ದೇಶನ ಮಾಡುತ್ತಿದ್ದೆ. ಆಗ ರಾಂಚಿಯಿಂದ ಒಂದು ಕರೆ ಬಂತು. ನೀವು ರೈಲ್ವೆ ಇಲಾಖೆ ಕುರಿತು ಒಂದು ಸಾಕ್ಷಿ ಚಿತ್ರ ಮಾಡಿಕೊಡಬೇಕು ಎಂದು ಹೇಳಲಾಯಿತು. ಸಾಮಾನ್ಯವಾಗಿ ಸರ್ಕಾರ ಇಂತಹ ವಿಷಯವನ್ನು ಟೆಂಡರ್ ಮೂಲಕ ಕರೆಯುತ್ತದೆ. ಅನುಮಾನ ಬಂದು ಈ ಬಗ್ಗೆ ಅಲ್ಲಿನ ಪೊಲೀಸ್ ಅಧಿಕಾರಿ ಪ್ರವೀಣ್ ಕುಮಾರ್ ಎನ್ನುವರಿಗೆ ಕರೆ ಮಾಡಿದಾಗ ಅವರು ಇದು ಸುಳ್ಳು. ನೀವು ರಾಂಚಿಗೆ ಬರಬೇಡಿ ಎಂದರು. ಈ ರೀತಿ ಸಾಕಷ್ಟು ನಿರ್ಮಾಪಕರು, ನಿರ್ದೇಶಕರು ಮೋಸದ ಕರೆಗಳಿಗೆ ಬಲಿಯಾಗಿದ್ದಾರೆ. ಈ ವಿಷಯವನ್ನು ಇಟ್ಟುಕೊಂಡು ರಾಂಚಿ ಸಿನಿಮಾ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಚಿತ್ರದ ಚಿತ್ರೀಕರಣವನ್ನು ರಾಂಚಿಯಲ್ಲಿ ಹೆಚ್ಚಿನ ಭಾಗ ಮುಗಿಸಲಾಗಿದೆ. 2020ರಲ್ಲಿ ಚಿತ್ರ ಸೆನ್ಸರ್ ಆಗಿತ್ತು. ಕೊರೋನಾ ಕಾರಣದಿಂದ ಬಿಡುಗಡೆ ವಿಳಂಬವಾಗಿದೆ ಎಂದು ನಿರ್ದೇಶಕ ಶಶಿಕಾಂತ್ ಗಟ್ಟಿ ಹೇಳಿದ್ದಾರೆ.
ಚಿತ್ರದಲ್ಲಿ ದಿವ್ಯ ಉರುಡುಗ, ಟೋಟ ರಾಯ್ ಚೌದರಿ, ಆರತಿ ನಾಯರ್, ಲಕ್ಷ್ಮಣ್ ಗೌಡ, ಉಷಾ ಭಂಡಾರಿ, ಸುರೇಶ್ ಹೆಬ್ಳಿಕರ್ ಇತರರು ನಟಿಸಿದ್ದಾರೆ.
____ 

Be the first to comment