ನಟ ದರ್ಶನ್ ಬೆಂಗಳೂರಿನ ಜಿಟಿ ಮಾಲ್ ನಲ್ಲಿ ಸ್ನೇಹಿತ ಧನ್ವೀರ್ ಅಭಿನಯದ ‘ವಾಮನ’ ಸಿನಿಮಾ ವೀಕ್ಷಿಸಿದ್ದಾರೆ.
ಇಂದು ತೆರೆಕಂಡ ‘ವಾಮನ’ ಸಿನಿಮಾ ವೀಕ್ಷಿಸಿದ ಬಳಿಕ ದರ್ಶನ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿ, ‘ವಾಮನ ಬಲಿ ಚಕ್ರವರ್ತಿಯ ಬಳಿ ಬಂದು ಮೂರು ಹೆಜ್ಜೆಗಳನ್ನಿಡಲು ಜಾಗ ಕೇಳುತ್ತಾನೆ. ಅದೇ ರೀತಿ ಧನ್ವೀರ್ ಕನ್ನಡ ಪ್ರೇಕ್ಷಕರ ಬಳಿ ಈ ಸಿನಿಮಾ ಗೆಲುವನ್ನು ಕೇಳುತ್ತಿದ್ದಾರೆ. ಅವರನ್ನು ಹರಸಿ ಹಾರೈಸಿ ಬೆಳೆಯಲು ಅವಕಾಶ ಕೊಡಿ’ ಎಂದರು.
‘ನಾವು ಮಾಡುತ್ತಿರುವುದು ಕನ್ನಡ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ಕರ್ನಾಟಕ ಜನತೆಗೆ ಇಲ್ಲಿರುವ ಪ್ರೇಕ್ಷಕರಿಗಾಗಿ ಸಿನಿಮಾ ಮಾಡ್ತೀವಿ. ಒಳ್ಳೆ ನಿರ್ದೇಶಕರು, ಒಳ್ಳೆ ಕಥೆ ಸಿಕ್ಕರೆ ಖಂಡಿತ ಧನ್ವೀರ್ ಜೊತೆ ನಟಿಸುತ್ತೇನೆ’ ಎಂದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಸಾಕ್ಷಿ ಚಿಕ್ಕಣ್ಣ ಜೊತೆ ದರ್ಶನ್ ಒಟ್ಟಿಗೆ ಸಿನಿಮಾ ವೀಕ್ಷಿಸಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ. ಜಾಮೀನು ಪಡೆದು ಹೊರಬಂದ ಆರೋಪಿಗಳು ಪ್ರಕರಣದ ಸಾಕ್ಷಿಗಳನ್ನು ಭೇಟಿ ಮಾಡುವಂತಿಲ್ಲ. ಆರೋಪಿ ಸಾಕ್ಷಿಯ ಮೇಲೆ ಪ್ರಭಾವ ಬೀರಬಹುದು ಎನ್ನುವ ಕಾರಣಕ್ಕೆ ಈ ನಿಯಮ ಇದೆ.
ರೇಣುಕಾಸ್ವಾಮಿ ಹತ್ಯೆ ನಡೆದ ದಿನ ದರ್ಶನ್ ಪಟ್ಟಣಗೆರೆ ಶೆಡ್‌ಗೆ ಹೋಗುವ ಮುನ್ನ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಹಾಸ್ಯನಟ ಚಿಕ್ಕಣ್ಣ ಭಾಗಿ ಆಗಿದ್ದರು. ಹಾಗಾಗಿ ಚಿಕ್ಕಣ್ಣ ಅವರನ್ನು ಸಾಕ್ಷಿ ಆಗಿ ಪರಿಗಣಿಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಅನಾರೋಗ್ಯ ಕಾರಣ ನೀಡಿ ಮೊನ್ನೆ ಕೋರ್ಟ್ ಗೆ ವಿಚಾರಣೆಗೆ ಗೈರಾಗಿದ್ದ ದರ್ಶನ್ ವಿರುದ್ಧ ನ್ಯಾಯಾಧೀಶರು ಗರಂ ಆಗಿದ್ದರು.
—-

Be the first to comment