ಜೈಲಿನಲ್ಲಿ ದರ್ಶನ್‌ ರೌಡಿಗಳ ಜತೆ ಕುಶಲೋಪರಿ: ಫೋಟೋ ವೈರಲ್‌

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿರುವ ಕನ್ನಡ ನಟ ದರ್ಶನ್‌ ತೂಗುದೀಪ ಜೈಲಿನಲ್ಲಿ ನಟೋರಿಯಸ್‌ ರೌಡಿಗಳ ಜತೆ  ಉಭಯ ಕುಶಲೋಪರಿ ನಡೆಸುತ್ತಿರುವ ಫೋಟೋ ವೈರಲ್‌ ಆಗಿ ಸದ್ದು ಮಾಡುತ್ತಿದೆ.

ವೈರಲ್‌ ಆದ ಫೋಟೋ  ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ.   ಈ ಪ್ರಕರಣವನ್ನು ಗೃಹಸಚಿವ ಜಿ ಪರಮೇಶ್ವರ್‌ ಗಂಭೀರವಾಗಿ ತೆಗೆದುಕೊಂಡಿದ್ದು, ಜೈಲು ಅಧಿಕಾರಿಗಳ ಅಮಾನತಿಗೆ ಸೂಚಿಸಿದ್ದಾರೆ. ಇದೇ ಸಂದರ್ಭದಲ್ಲಿ ದರ್ಶನ್‌ ಜತೆ ಕುಳಿತು ಮಾತನಾಡುತ್ತ ಇರುವ ನಟೋರಿಯಸ್‌ ರೌಡಿಗಳ ಕುರಿತು ಹೆಚ್ಚಿನ ವಿವರಗಳು ಹೊರ ಬೀಳುತ್ತಿವೆ.

ಫೋಟೋದಲ್ಲಿ ದರ್ಶನ್‌ ಕಪ್‌ನಲ್ಲಿ ಪಾನೀಯ  ಕುಡಿಯುತ್ತಿರುವ ದೃಶ್ಯವಿದೆ. ಒಂದು ಕೈಯಲ್ಲಿ ಸಿಗರೇಟು ಕೂಡ ಇದೆ. ಚೇರ್‌ಗಳಲ್ಲಿ ಎಲ್ಲರೂ ಕುಳಿತು  ಜೈಲಿನ ಅಂಗಳದಲ್ಲಿ ಆರಾಮವಾಗಿ ಮಾತನಾಡುತ್ತಿದ್ದಾರೆ. ಈ ನಾಲ್ಕು ಜನರು ಜತೆಗೆ ಕುಳಿತಿರುವ ಫೋಟೋ ಜೈಲಿನ ವ್ಯವಸ್ಥೆಯ ಕುರಿತು ನಾನಾ ಪ್ರಶ್ನೆಗಳನ್ನು ಮೂಡಿಸಿದೆ.

ಫೋಟೋದಲ್ಲಿ ಇರುವ ವಿಲ್ಸನ್‌ ಗಾರ್ಡನ್‌ ನಾಗ ನಟೋರಿಯಸ್‌ ರೌಡಿ. ಸದ್ಯ ಸಿದ್ದಾಪುರ ಮಹೇಶನ ಮರ್ಡರ್‌ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಕೊಲೆ ಪ್ರಕರಣದ ಬಳಿಕ ಕೋರ್ಟ್‌ ಮುಂದೆ ಶರಣಾಗಿದ್ದ. ಕೋಕಾ ಕಾಯ್ದೆಯಡಿ ಪೊಲೀಸರು ವಿಲ್ಸನ್‌ ಗಾರ್ಡನ್‌ ನಾಗನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಅನ್ನಪೂರ್ಣೇಶ್ವರಿ ನಗರದ ಜಿಮ್‌ ಸುಬ್ಬು ಕೊಲೆ ಪ್ರಕರಣವೂ ವಿಚಾರಣೆಯಲ್ಲಿದೆ. ಕಡಬಗೆರೆ ಶ್ರೀನಿವಾಸ್‌ ಮೇಲೆ ಶೂಟೌಟ್‌, ವೈಟ್‌ಫೀಲ್ಡ್‌ನಲ್ಲಿ ಸಹೇಲ್‌ ಕೊಲೆ ಪ್ರಕರಣ, ಮಡಿವಾಳದ ನಗರಬಾಬು ಕೊಲೆ ಪ್ರಕರಣ, ವಿಲ್ಸನ್‌ ಗಾರ್ಡನ್‌ನ ಶ್ರೀನಿವಾಸ್‌ ಕೊಲೆ, ರೌಡಿಶೀಟರ್‌ ಗುಪ್ಪನ ಕೊಲೆ ಸೇರಿಂತೆ ಹಲವು ಪ್ರಕರಣಗಳು ನಟೋರಿಯಸ್‌ ವಿಲ್ಸನ್‌ ಗಾರ್ಡನ್‌ ನಾಗ ಕ್ರೈಮ್‌ ಹಿಸ್ಟರಿಯಲ್ಲಿವೆ.

ಫೋಟೋದಲ್ಲಿ ಇರುವ  ಇನ್ನೊಬ್ಬ ಬೆಂಗಳೂರು ದಕ್ಷಿಣದಲ್ಲಿ  ಕಾರ್ಪೊರೇಟರ್‌ ಕೊಲೆ ಪ್ರಕರಣದಲ್ಲಿ ಸಜಾ ಕೈದಿಯಾಗಿರುವ  ದೊಡ್ಡಕಲ್ಲಸಂದ್ರದ ಕುಳ್ಳಸೀನ. ಇವರಿಬ್ಬರು ಮಾತ್ರವಲ್ಲದೆ ದರ್ಶನ್‌,  ರೌಡಿ ಧರ್ಮನ ಮೊಬೈಲ್‌ನಿಂದ ವಿಡಿಯೋ ಕಾಲ್‌ ಮಾಡಿರುವ ವಿಚಾರ ಬಹಿರಂಗವಾಗಿದೆ. ಕಾರ್ತಿಕೇಯನ ಕೊಲೆ ಪ್ರಕರಣದಲ್ಲಿ ಧರ್ಮ ಆರೋಪಿಯಾಗಿ ಜೈಲಿನಲ್ಲಿದ್ದಾನೆ. ವಿಡಿಯೋ ಕಾಲ್‌ನಲ್ಲಿ ಮಾತನಾಡಿದ್ದು ರೌಡಿ ಸತ್ಯ ಎಂಬ ವಿಷಯವೂ ಬಯಲಾಗಿದೆ.  ಜೈಲಿನೊಳಗೆ ಇರುವ ದರ್ಶನ್‌ ಸದ್ಯ ರೌಡಿಗಳ ಸಹವಾಸದಲ್ಲಿದ್ದಾರೆ ಎಂಬ ವಿಚಾರ ಸಾಕಷ್ಟು ಚರ್ಚೆಗೆ ಈಡು ಮಾಡಿದೆ.

ದರ್ಶನ್‌  ಪ್ರತ್ಯೇಕ ಬ್ಯಾರಕ್‌ನಲ್ಲಿ ಒಂಟಿಯಾಗಿ ಅಧ್ಯಾತ್ಮ ಪುಸ್ತಕ ಓದುತ್ತ, ತನ್ನ ತಪ್ಪುಗಳ ಕುರಿತು ಆತ್ಮಾವಲೋಕನ ಮಾಡುತ್ತಾ ಇರಬಹುದು ಎಂದುಕೊಂಡವರಿಗೆ  ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ದೊರಕುತ್ತಿರುವ ಫೋಟೋ  ಅಚ್ಚರಿ ತಂದಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ  ರೇಣುಕಸ್ವಾಮಿ ಅವರ ತಂದೆ ಶಿವ ಗೌಡ, ‘ಈ ಘಟನೆಯಿಂದ ಪೊಲೀಸರ ಬಗ್ಗೆ ನಂಬಿಕೆಯೇ ಹೋಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜೈಲರ್‌ಗಳಾದ ಶರವಣ, ಶರಣ ಬಸವ ಅಮೀನಗಡ, ಪ್ರಭು ಎಸ್‌ ಖಂಡೇಲ್‌ವಾಲ್, ಅಸಿಸ್ಟೆಂಟ್ ಜೈಲರ್‌ಗಳಾದ ಎಲ್.ಎಸ್.ತಿಪ್ಪೇಸ್ವಾಮಿ, ಶ್ರೀಕಾಂತ್ ತಲವಾರ್, ಹೆಡ್ ವಾರ್ಡರ್‌ಗಳಾದ ವೆಂಕಪ್ಪ ಪೊರ್ಕಿ, ಸಂಪತ್‌ಕುಮಾರ್ ಕಡಪಟ್ಟಿ, ವಾರ್ಡರ್ ಬಸಪ್ಪ ಕೇರಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಗೃಹಸಚಿವ ಪರಮೇಶ್ವರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೊಲೀಸ್ ಮಹಾನಿರ್ದೇಶಕರು (ಡಿಜಿ, ಪ್ರಿಸನ್ಸ್‌)  ಪರಪ್ಪನ ಅಗ್ರಹಾರದ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ ಹೋಗಿದ್ದಾರೆ ಎಂದು ಅವರು ಹೇಳಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!