ಪಝಲ್ ಆಟದಂತೆ ಕಲಾವಿದರು ಎಲ್ಲವನ್ನು ಜೋಡಿಸಿದಾಗ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ ಭಾವಚಿತ್ರ ಮೂಡಿಬಂತು. ನಂತರ ಅದನ್ನು ತಿರುಗಿಸಿದಾಗ ’ದಂಡತೀರ್ಥ’ ಚಿತ್ರದ ಶೀರ್ಷಿಕೆ ಅನಾವರಣಗೊಂಡಿತು. ವೈಕುಂಠ ಏಕಾದಶಿ ಶುಭದಿನದಂದು ಸದರಿ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಸುಮಾರು 78 ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ಹರಿಪ್ರಾಣ ಮೊದಲ ಅನುಭವ ಎನ್ನುವಂತೆ ’ಪ್ರಾಣ ಪ್ರೊಡಕ್ಷನ್’ ಸಂಸ್ಥೆ ಹುಟ್ಟುಹಾಕಿ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಇದರ ಸಲುವಾಗಿ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇವರ ಶ್ರಮಕ್ಕೆ ಉಮೇಶ್ ಬಂಡವಾಳ ಹೂಡುತ್ತಿದ್ದಾರೆ.
ವಿಷಯಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ನಿರ್ದೇಶಕರು ದಂಡ ಎಂದರೆ ಶಿಕ್ಷೆ. ತೀರ್ಥಕ್ಕೆ ಪ್ರಸಾದ ಎನ್ನುವುದುಂಟು. ಆಂಜನೇಯನ ಭಕ್ತನಿಗೆ ಮತ್ತು ಮಾರುತಿಗೆ ಮತ್ತೋಂದು ಹೆಸರು ಇದೇ ಆಗಿರುತ್ತದೆ. ಮೊದಲರ್ಧ ನೈಜ ಘಟನೆಯಲ್ಲಿ ಕಾಮಿಡಿ, ಉಳಿದದ್ದು ಕಾಲ್ಪನಿಕವಾಗಿ ರಿವೆಂಜ್ ಸ್ಟೋರಿಯಲ್ಲಿ ಸಾಗುತ್ತದೆ. ಮಾಧ್ಯಮದವರು ಸ್ಟಿಂಗ್ ಆಪರೇಶನ್ ನಡೆಸುವಂತೆ, ಸಿನಿಮಾದಲ್ಲೂ ಇದೇ ರೀತಿಯ ಹೋಲಿಕೆ ಇರುತ್ತದೆ. ನಾಲ್ಕು ಹಾಸ್ಯ ನಟರಿಗೆ ಗಂಭೀರವಾದ ಪಾತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಬೆಂಗಳೂರು, ಮೈಸೂರು ಕಡೆಗಳಲ್ಲಿ ಚಿತ್ರೀಕರಣವನ್ನು ನೂತನ ವರ್ಷದಿಂದ ಹೊಸತನದಲ್ಲಿ ನಡೆಸಲು ಯೋಜನೆ ಹಾಕಲಾಗಿದೆ.
ಅಲ್ಲದೆ ’ಪ್ರಾಣ ಆಡಿಯೋ’ ಮುಂದಿನ ದಿನಗಳಲ್ಲಿ ಶುರು ಮಾಡಲಾಗುತ್ತಿದೆ. ಹಾಗೂ ’ಪ್ರಾಣ ಎಂಟರ್ಟೈನ್ಮೆಂಟ್’ ಮೂಲಕ ರಾಜ್ಯದಾದ್ಯಂತ ಡ್ಯಾನ್ಸರ್, ಗಾಯಕರುಗಳಿಗೆ ವೇದಿಕೆ ಕಲ್ಪಿಸಲು ರಿಯಾಲಿಟಿ ಷೋ ನಡೆಸಲಾಗುವುದು. ಇದರಲ್ಲಿ ಗೆದ್ದ ಮೂವರಿಗೆ ಬಹುಮಾನ ನೀಡಿ, ಚಿತ್ರಗಳಿಗೆ ಇವರುಗಳ ಹೆಸರುಗಳನ್ನು ಶಿಪಾರಸ್ಸು ಮಾಡಲಾಗುತ್ತದೆ ಎಂಬುದರ ಮಾಹಿತಿ ನೀಡಿದರು.
ತಾರಾಗಣದಲ್ಲಿ ಅವಿನಾಶ್(ಜ್ಯೂ.ದರ್ಶನ್), ರಜನಿಕಾಂತ್, ರೇಣುಕಪ್ರಸಾದ್, ಕುರಿಪ್ರತಾಪ್, ಚಂದ್ರಪ್ರಭ, ಜ್ಯೋತಿ, ದೇವುಸಕಲೇಶಪುರ, ಖಳನಾಗಿ ಪುನೀತ್ ಮತ್ತು ಶರಣ್, ಬೇಬಿ ಶಾನ್ವಿ ನಾಯಕಿಯರುಗಳಾಗಿ ಮಾನಸಗೌಡ, ಪೂಜರಾಮಚಂದ್ರ ಮುಂತಾದವರು ನಟಿಸುತ್ತಿದ್ದಾರೆ. ಛಾಯಾಗ್ರಹಣ ಜಿ.ರಂಗಸ್ವಾಮಿ, ನೃತ್ಯ ಜಿ.ಪಿ.ಆರಾಧ್ಯ, ಕಾರ್ಯಕಾರಿ ನಿರ್ಮಾಪಕ ವಿಜಯ್, ವಸ್ತ್ರ ವಿನ್ಯಾಸ ಲೇಖನ ಅವರದಾಗಿದೆ.
Be the first to comment