ಬನಾರಸ್ ಚಿತ್ರದ ಕಡೆಯಿಂದ ಒಂದರ ಹಿಂದೊಂದರಂತೆ ಖುಷಿಯ ಸಂಗತಿಗಳು ಹೊರ ಬೀಳುತ್ತಿವೆ. ಹೊಸತನಗಳಿಂದಲೇ ಮೈ ಕೈ ತುಂಬಿಕೊಂಡಿರುವ ಚಿತ್ರವೊಂದು ಹೆಜ್ಜೆ ಹೆಜ್ಜೆಗೂ ದಾಖಲೆ ಬರೆಯುತ್ತಾ ಮುಂದುವರೆಯುತ್ತೆ. ಸದ್ಯ ಬನಾರಸ್ ಚಿತ್ರದ ನಡೆ ಆ ಮಾತಿಗೆ ಅನ್ವರ್ಥ ಎಂಬಂತಿದೆ. ಒಂದು ಕಡೆಯಿಂದ ತಂಗಾಳಿಯಂತೆ ತೇಲಿ ಬಂದು ಎಲ್ಲರ ಮನಸೋಕಿ ಮುದಗೊಳಿಸಿರುವ ಮಾಯಗಂಗೆ, ಮತ್ತೊಂದೆಡೆ ವಾರದ ಹಿಂದಷ್ಟೇ ಬಿಡುಗಡೆಗೊಂಡು ಮಿಲಿಯನ್ನುಗಟ್ಟಲೆ ವೀವ್ಸ್ ಪಡೆದು ಪ್ರಸಿದ್ಧಿ ಪಡೆದುಕೊಂಡಿರುವ ಟ್ರೈಲರ್… ಇದೆಲ್ಲದರಿಂದಾಗಿ ನಿಗಿ ನಿಗಿಸೋ ನಿರೀಕ್ಷೆ ಮೂಡಿಸಿರುವ ಬಾನಾರಸ್ ದಿಕ್ಕಿನಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಈ ಸಿನಿಮಾದ ವಿಶಾಲ ಕರ್ನಾಟಕ ವಿತರಣಾ ಹಕ್ಕನ್ನು ಖ್ಯಾತ ವಿತರಣಾ ಸಂಸ್ಥೆ ಡಿ ಬೀಟ್ಸ್ ಪಡೆದುಕೊಂಡಿದೆ.
ಶೈಲಜಾ ನಾಗ್ ಮತ್ತು ಬಿ ಸುರೇಶ್ ಸಾರಥ್ಯದ ಡಿ ಬೀಟ್ಸ್ ಎಂಥಾ ಗುಣಮಟ್ಟವನ್ನು ಕಾಯ್ದುಕೊಂಡಿರುವ ಚಿತ್ರವೆಂಬುದು ಎಲ್ಲರಿಗೂ ಗೊತ್ತಿದೆ. ಈ ಸಂಸ್ಥೆಯಿಂದ ಬಿಡುಗಡೆಗೊಳ್ಳುವುದೇ ಪ್ರತಿಷ್ಠೆಯ ಸಂಗತಿ ಎಂಬಂಥಾ ವಾತಾವರಣವೂ ಇದೆ. ಎಲ್ಲ ದಿಕ್ಕುಗಳಿಂದಲೂ ಹಿಡಿಸಿದರೆ ಮಾತ್ರವೇ ಅಂಥಾ ಚಿತ್ರಕ್ಕೆ ಡಿ ಬೀಟ್ಸ್ ಕಡೆಯಿಂದ ಬಿಡುಗಡೆಯ ಭಾಗ್ಯ ಸಿಗುತ್ತದೆ. ಅಂಥಾದ್ದರಲ್ಲಿ ಶೈಲಜಾ ನಾಗ್ ವಿತರಣಾ ಹಕ್ಕು ಖರೀದಿಸಿದ್ದಾರೆಂದರೆ, ಬನಾರಸ್ ಮೂಡಿ ಬಂದಿರುವ ರೀತಿ ಎಂಥಾದ್ದಿದೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಅದುವೇ ಬನಾರಸ್ ಬಗೆಗಿನ ಬೆರಗನ್ನು ಇಮ್ಮಡಿಯಾಗುವಂತೆ ಮಾಡಿದೆ.
ಬನಾರಸ್ ಅನ್ನು ವಿಶಾಲ ಕರ್ನಾಟಕಕ್ಕೆ ಯಾವ ಸಂಸ್ಥೆಯ ಮೂಲಕ ವಿತರಣೆ ಮಾಡುತ್ತಾರೆಂಬ ಕುತೂಹಲಕ್ಕೆ ಈ ಮೂಲಕ ತೆರೆಬಿದ್ದಿದೆ. ನಿರೀಕ್ಷೆಯಂತೆಯೇ ಡಿ ಬೀಟ್ಸ್ ವಿತರಣಾ ಹಕ್ಕನ್ನು ಖರೀದಿಸಿದೆ. ಅತ್ಯಂತ ವ್ಯವಸ್ಥಿತವಾಗಿ ಚಿತ್ರವನ್ನು ಕರ್ನಾಟಕದ ತುಂಬೆಲ್ಲ ಪಸರಿಸೋದು ಡಿ ಬೀಟ್ಸ್ ಹೆಚ್ಚುಗಾರಿಕೆ. ಅದಕ್ಕೆ ತಕ್ಕುದಾಗಿಯೇ ಬನಾರಸ್ ಬಿಡುಗಡೆಗೆ ಪ್ಲಾನು ಮಾಡಿಕೊಳ್ಳಲಾಗಿದೆ. ಈ ವಿದ್ಯಮಾನದಿಂದಾಗಿ ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್ ಸಂತೃಪ್ತರಾಗಿದ್ದಾರೆ. ನಾಯಕ ನಟ ಝೈದ್ ಖಾನ್ ಮುಖದಲ್ಲಿಯೂ ಸಂತಸ ಮಿರುಗುತ್ತಿದೆ.
ಬನಾರಸ್ ಬಿಡುಗಡೆಗೆ ಇನ್ನು ಬಾಕಿ ಉಳಿದಿರೋದು ಕೆಲವೇ ದಿನಗಳು ಮಾತ್ರ. ಈ ಸಂಬಂಧವಾಗಿ ಝೈದ್ ಖಾನ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ನಾಯಕಿ ಸೋನಲ್ ಮೊಂತೇರೋ ಕೂಡಾ ಅದಕ್ಕೆ ಸಾಥ್ ಕೊಟ್ಟಿದ್ದಾರೆ. ಒಂದಿಡೀ ಚಿತ್ರತಂಡವೇ ನಾನಾ ಜವಾಬ್ದಾರಿ ಹೊತ್ತು ಉತ್ಸಾಹದಿಂದ ಮುಂದಡಿ ಇಡುತ್ತಿದೆ. ಇದೀಗ ಕರ್ನಾಟಕದಲ್ಲಿ ವಿತರಣಾ ಹಕ್ಕು ಡಿ ಬೀಟ್ಸ್ ಉಡಿ ಸೇರುತ್ತಲೇ, ಇನ್ನುಳಿದ ಒಂದಷ್ಟು ಭಾಷೆಗಳಲ್ಲಿಯೂ ಮಾತುಕತೆ ನಡೆಯುತ್ತಿವೆ. ದೊಡ್ಡ ಸಂಸ್ಥೆಗಳೇ ವಿತರಣಾ ಹಕ್ಕು ಖರೀದಿಸಲು ಮುಂದೆ ಬಂದಿವೆ. ಒಟ್ಟಾರೆಯಾಗಿ ಬನಾರಸ್ ಪ್ರಥಮ ಹೆಜ್ಜೆಯಲ್ಲಿಯೂ ನಿರ್ಣಾಯಕವಾಗಿ ಸದ್ದು ಮಾಡುತ್ತಿದೆ.
Be the first to comment