ದಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ದೂದ್‌ಪೇಡಾ ದಿಗಂತ್ ಮತ್ತು ಬೆಂಗಾಲಿ ಬೆಡಗಿ ಐಂದ್ರಿತಾ ರೇ ಸದ್ಯದಲ್ಲಿಯೇ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ. ಡಿಸೆಂಬರ್ 11, 12ರಂದು ಬೆಂಗಳೂರಿನಲ್ಲಿ ಐಂದ್ರಿತಾ ರೇ, ದಿಗಂತ್ ಮದುವೆಯಾಗಲಿದ್ದಾರೆ. ಈ ವೇಳೆ, ಸ್ಯಾಂಡಲ್‌ವುಡ್ ನಟ ನಟಿಯರು ಸಾಕ್ಷಿಯಾಗಲಿದ್ದು, ಕನ್ನಡ ಮತ್ತು ಬಂಗಾಳಿ ಶೈಲಿಯಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ.
ದಿಗಂತ್ ಮತ್ತು ಐಂದಿತ್ರಾ ನಡುವೆ ಏನೋ ನಡೆಯುತ್ತಿದೆ ಎಂಬ ಗುಸು-ಗುಸು ಶುರುವಾಗಿ ಅನೇಕ ವರ್ಷಗಳೇ ಉರುಳಿವೆ. ಈ ಪ್ರಣಯದ ಪಕ್ಷಿಗಳು ಕೆಲವು ವರ್ಷಗಳ ಹಿಂದೆಯೇ ಸತಿ-ಪತಿಗಳಾಗಬೇಕಿತ್ತು. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕಲ್ಲವೇ ? ಈಗ ಡಿಸೆಂಬರ್ 13ರಂದು ದಿಗಂತ್, ಐಂದಿತ್ರಾಗೆ ಮಾಂಗಲ್ಯಧಾರಣೆ ಮಾಡುವುದು ಬಹುತೇಕ ಖಚಿತವಾಗಿದೆ.
ಈ ಜೋಡಿ ಇದುವರೆಗೂ ತಮ್ಮ ಪ್ರೀತಿ-ಪ್ರೇಮವನ್ನು ಮಾಧ್ಯಮದ ಎದುರು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಖಾಸಗಿ ವಾಹಿನಿಗಳ ಪ್ರತ್ಯೇಕ ಟಾಕ್ ಶೋಗಳಲ್ಲಿ ದಿಗ್ಗಿ ಮತ್ತು ಐಂದ್ರಿತಾ ತಮ್ಮ ಲವ್ವಿ-ಡವ್ವಿ ಗುಟ್ಟನ್ನು ರಟ್ಟು ಮಾಡಿದ್ದರು. ಸ್ಯಾಂಡಲ್‍ವುಡ್ ಸೆಂಚುರಿ ಸ್ಟಾರ್ ಡಾ.ಶಿವರಾಜಕುಮಾರ್ ಟಾಕ್‍ಶೋನಲ್ಲಿ ದಿಗಂತ್‍ನಿಂದ ಇದನ್ನು ಬಾಯಿ ಬಿಡಿಸಿದ್ದರು. ಶಿವಣ್ಣ ಕೇಳಿದ ಪ್ರಶ್ನೆಗೆ ಉತ್ತರಿಸದೇ ಬೇರೆ ಮಾರ್ಗ ಇಲ್ಲದ ದಿಗಂತ್ ಇದೇ ವರ್ಷಾಂತ್ಯದಲ್ಲಿ ನಮ್ಮ ಮದುವೆ ನಡೆಯಲಿದೆ ಎಂದು ತಿಳಿಸಿದ್ದರು.
ಬೆಂಗಳೂರಿನಲ್ಲಿ ಈ ತಾರಾ ಜೋಡಿ ತಮ್ಮ ವಿವಾಹವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಚಿತ್ರರಂಗದ ಖ್ಯಾತನಾಮರು ಸೇರಿದಂತೆ ಅತಿಗಣ್ಯ ವ್ಯಕ್ತಿಗಳು ಹಾಗೂ ಆಪ್ತೇಷ್ಟರನ್ನು ಮಾತ್ರ ಮದುವೆಗೆ ಆಹ್ವಾನಿಸಲಿದ್ದಾರೆ. ಅದ್ದೂರಿ ವಿವಾಹ ಮತ್ತು ಆರತಕ್ಷತೆಗೆ ದುಬಾರಿ ಹಣ ವ್ಯಯಿಸುವ ಬದಲು ಆ ಹಣವನ್ನು ಸಮಾಜದ ಒಳತಿಗಾಗಿ ಬಳಸಲು ಈ ಜೋಡಿ ನಿರ್ಧರಿಸಿದ್ದಾರಂತೆ. ಒಟ್ಟಾರೆ ಡಿಸೆಂಬರ್‍ನಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಲವ್‍ಬರ್ಡ್‍ಗಳ ಮದುವೆಗೆ ವೇದಿಕೆ ಸಜ್ಜಾಗುತ್ತಿದೆ.
Pingback: Small business health insurance