ಕಲ್ಟ್

Movie Review: ಕಲ್ಟ್ ಪವರ್ ಸಾವಿರ ವಾಲ್ಟ್..!

ಚಿತ್ರ: ಕಲ್ಟ್
ನಿರ್ದೇಶನ: ಅನಿಲ್ ಕುಮಾರ್ ಟಿ.ಎಮ್
ತಾರಾಗಣ: ಜೈದ್ ಖಾನ್, ರಚಿತಾ ರಾಮ್, ಮಲೈಕಾ‌ ವಸುಪಾಲ್ ಮೊದಲಾದವರು
ರೇಟಿಂಗ್: 3.5/5

ಪ್ರೇಮಿಯೊಬ್ಬನ ಜೀವನವನ್ನು ಅದ್ಭುತವಾಗಿ ಹೇಳಿರುವಂಥ ಕಥೆ ಕಲ್ಟ್. ಹಳ್ಳಿಗಾಡಿನಲ್ಲಿ ಮುಗ್ದವಾಗಿದ್ದ ನಾಯಕ ನಾಯಕಿ ನಗರ ಸೇರಿದಾಗ ಬದಲಾಗುವ ರೀತಿ ಮತ್ತು ಅದರ ಕಾರಣ ಬಯಲಾಗುವಾಗ ಆಗುವ ಭೀತಿ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಅನುಭವಿಸಲೇಬೇಕು.

ಕೃಷ್ಣಾಪುರದ ಕಾಲೇಜ್ ವಿದ್ಯಾರ್ಥಿಗಳಾದ ಮಾಧವ ಮತ್ತು ಗೀತಾ ಪರಸ್ಪರ ಅತ್ಯಂತ ಆಪ್ತವಾಗಿ ಪ್ರೇಮಿಸುತ್ತಿರುತ್ತಾರೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಮಾಧವ ಮಣಿಪಾಲ ಸೇರಿದರೆ ಗೀತಾ ಬೆಂಗಳೂರು ಸೇರುತ್ತಾಳೆ. ಆದರೆ ಬೆಂಗಳೂರಿಗೆ ಹೋದ ಬಳಿಕ ಗೀತಾ ಮಾಧವನನ್ನು ಮರೆಯುತ್ತಾ ಹೋಗುವುದೇಕೆ? ಕಾರಣ ಅರಿಯದೆ ಗೀತಾಳ ಭೇಟಿಗೆ ಬೆಂಗಳೂರಿಗೆ ಹೋದ ಮಾಧವ ಆಘಾತಗೊಳ್ಳುವುದೇಕೆ? ಮಾಧವ ಮ್ಯಾಡಿಯಾಗಿ ಬದಲಾದ ಮೇಲೆ ಆಗುವ ಬದಲಾವಣೆಗಳೇನು? ಇವೆಲ್ಲವನ್ನು ಪರದೆಯ ಮೇಲೆ ನೋಡುವ ಅವಕಾಶ ಕಳೆದುಕೊಳ್ಳಬಾರದು.

ಮಾಧವ ಮತ್ತು ಮ್ಯಾಡಿ ಎನ್ನುವ ಎರಡು ಪಾತ್ರಗಳಲ್ಲಿ ಜೈದ್ ಖಾನ್ ನೀಡಿರುವ ನಟನೆ ಅದ್ಭುತ. ಎರಡರ ವ್ಯತ್ಯಾಸವನ್ನು ತುಂಬ ಚೆನ್ನಾಗಿ ಕಾಣಿಸುವಂತೆ ಮಾಡಿದ್ದಾರೆ. ನಾಯಕಿಯಾಗಿ ಮಲೈಕಾ‌ ವಸುಪಾಲ್ ಕೂಡ ಎರಡು ರೀತಿಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಗ್ರಾಮೀಣ ಸೊಗಡು ಮತ್ತು ನಗರದ ಕಾಸ್ಟ್ಯೂಮ್ ಎರಡಕ್ಕೂ ಹೊಂದಿಕೊಳ್ಳುತ್ತಾರೆ. ಹಾಡುಗಳಲ್ಲಿ ಪ್ರೇಮ‌ಜೋಡಿಯಾಗಿ ಗಮನ ಸೆಳೆಯುತ್ತಾರೆ. ಅರ್ಜುನ್ ಸಂಗೀತದಲ್ಲಿನ ಹಾಡುಗಳು ಮೋಡಿ ಮಾಡುತ್ತವೆ.

ಇತಿಹಾಸಿನಿ ಪಾತ್ರದ ಮೂಲಕ ರಚಿತಾ ರಾಮ್ ವೃತ್ತಿ ಬದುಕಿನಲ್ಲಿ ಹೊಸ ಇತಿಹಾಸ ಬರೆಯುತ್ತಾ ಹೋಗಿದ್ದಾರೆ. ತಂದೆಯ ಪಾತ್ರದಲ್ಲಿ ರಂಗಾಯಣ ರಘು ಟೂರಿಸ್ಟ್ ಗೈಡ್ ಆಗಿ ಇತಿಹಾಸ ವಿವರಿಸುತ್ತಾರೆ. ತಂದೆ ಮಗಳ ಕಾಂಬಿನೇಶನ್ ಮಾತ್ರವಲ್ಲ ಒಂಟಿ‌ ಹೋರಾಟದ ಸನ್ನಿವೇಶದಲ್ಲೂ ರಚಿತಾ ಆಕರ್ಷಕ ನಟನೆ ನೀಡಿದ್ದಾರೆ.

ಕಿಶನ್ ಬೆಳಗಲಿ ನಿರ್ವಹಿಸಿರುವ ಪಾತ್ರ ಚಿತ್ರದ ಕಥೆಗೆ ತಿರುವು ನೀಡುತ್ತದೆ. ರವಿ ವರ್ಮ ಸಾಹಸ ಸಂಯೋಜನೆಯ ಹೊಡೆದಾಟದ ದೃಶ್ಯಗಳು‌‌ ಮೋಡಿ ಮಾಡುವಂತಿವೆ. ವಾಲಿ ಛಾಯಾಗ್ರಹಣ ಮತ್ತು ಕಲಾವಿದರ ಪ್ರಸಾದನ ಕೂಡ ಚಿತ್ರದ ಹೈಲೈಟ್ ಎಂದೇ ಹೇಳಬಹುದು. ಒಂದೊಳ್ಳೆಯ ಭಾವನಾತ್ಮಕ ಪ್ರೇಮಕಥೆಯನ್ನು ನೋಡಬಯಸುವವರಿಗೆ ಹೇಳಿ ಮಾಡಿಸಿದಂಥ ಚಿತ್ರ ಇದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!