ಅಂಥಾ ಸಾಧನೆಗೆ ಕಾರಣವಾಗಿರೋ ಚಿತ್ರ ಶಕೀಲಾ. ಇಂದ್ರಜಿತ್ ಲಂಕೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಇದೇ ತಿಂಗಳು ಬಿಡುಗಡೆಯಾಗಲು ಸಿದ್ದವಾಗಿದೆ. ಚಿತ್ರದ ಫಸ್ಟ್‍ಲುಕ್ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಬೆಂಗಳೂರಿನ ಸ್ಟಾರ್ ಹೋಟೆಲ್‍ವೊಂದರಲ್ಲಿ ನೆರವೇರಿತು.
ಆರಂಭದಲ್ಲಿ ಹಿಂದಿ ಭಾಷೆಯಲ್ಲಿ ಮಾತ್ರ ಎಂದು ಶುರುವಾಗಿದ್ದ ಈ ಚಿತ್ರ ಈಗ ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ರಿಲೀಸಾಗುತ್ತಿದೆ. ಹೆಚ್ಚಾಗಿ ಗ್ಲಾಮರಸ್ ಚಿತ್ರಗಳಲ್ಲೇ ಅಭಿನಯಿಸುವ ಮೂಲಕ ಗುರ್ತಿಸಿಕೊಂಡಂಥ ಮಲಯಾಳಂನ ಹೆಸರಾಂತ ನಟಿ, ಶಕೀಲಾ.
ಈ ಹೆಸರನ್ನು ಕೇಳಿರದ ಪಡ್ಡೆ ಹುಡುಗರೇ ಇಲ್ಲವೆನ್ನಬಹುದು. ಅಷ್ಟು ಫೇಮಸ್ ಈಕೆ. ಅದರಲ್ಲೂ 1990 ಹಾಗೂ 2000ದ ದಶಕದಲ್ಲಿ ಸಖತ್ ಫೇಮಸ್ ನಟಿ ಹಾಗೂ ನೃತ್ಯಗಾರ್ತಿ. ಆ ಸಂದರ್ಭದಲ್ಲಿ ಶಕೀಲಾ ಜನಪ್ರಿಯತೆ ಮುಗಿಲುಮುಟ್ಟಿತ್ತು.
ಒಂದೇ ವರ್ಷದಲ್ಲಿ ಅವರು ನಟಿಸಿದ ಹತ್ತಾರು ಸಿನಿಮಾಗಳು ಬಿಡುಗಡೆ ಆಗುತ್ತಿದ್ದವು. ಅವರ ಸಿನಿಮಾಗೆ ಹಣ ಹೂಡಿದ ನಿರ್ಮಾಪಕರು ಆ ಕಾಲದಲ್ಲೇ ಬಹುಕೋಟಿ ಲಾಭ ಗಳಿಸುತ್ತಿದ್ದರು. ಈ ನಟಿಯ ಬದುಕು ಅಷ್ಟು ಸುಲಭವಾಗಿರಲಿಲ್ಲ.
ಅವರು ಕೂಡ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. ಕಷ್ಟಗಳನ್ನು ಎದುರಿಸಿದ್ದಾರೆ. ಅವರ ಹಿಂದಿನ ಬದುಕೇ ಈಗ ಸಿನಿಮಾ ಆಗಿದೆ. ಶಕೀಲಾ ಪಾತ್ರವನ್ನು ಬಾಲಿವುಡ್ ನಟಿ ರಿಚಾ ಛಡ್ಡಾ ನಿಭಾಯಿಸಿದ್ದಾರೆ.
ತನ್ನ ಜೀವನದ ಬಗ್ಗೆ ಮಾಡಿರುವ ಚಿತ್ರದ ಕುರಿತಂತೆ ಮಾತನಾಡಿದ ಶಕೀಲಾ ನನ್ನ ಬದುಕಿನ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಚಿತ್ರಕ್ಕಾಗಿ ನಿರ್ದೇಶಕರು ನನ್ನ ಬಳಿ ಚರ್ಚಿಸಿಯೇ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ.
ಸಿನಿಮಾದಲ್ಲಿ ಎಷ್ಟು ಕಾಲ್ಪನಿಕ, ಎಷ್ಟು ವಾಸ್ತವ ಇದೆ ಎಂಬುದನ್ನು ನಾನು ಈಗಲೇ ಹೇಳುವುದಿಲ್ಲ. ಅದನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡಲಿ. ಈ ಸಂದರ್ಭದಲ್ಲಿ ನನ್ನ ಫ್ಯಾಮಿಲಿಯೇ ನನ್ನ ಜೊತೆಗಿಲ್ಲ. ನಾನು ಎಲ್ಲಿದ್ದೇನೆ? ಏನು ಮಾಡುತ್ತಿದ್ದೇನೆ ಎಂಬುದೆಲ್ಲವೂ ಅವರಿಗೆ ಗೊತ್ತಿದೆ. ಆದರೆ ಯಾರೂ ಜೊತೆಗೆ ಬರುವುದಿಲ್ಲ.
ನನ್ನ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ನಾನು ನನ್ನ ಫ್ಯಾಮಿಲಿಗಾಗಿಯೇ ಇಷ್ಟೆಲ್ಲ ಮಾಡಿದೆ . ಬಡತನ ಕಂಡವಳು ನಾನು. ಸ್ಕೆಚ್ ಪೆನ್ ಖರೀದಿಸಲು ಕೂಡ ನಮ್ಮ ಬಳಿ ಹಣ ಇರುತ್ತಿರಲಿಲ್ಲ. ಕುಟುಂದವರು ಖುಷಿಯಾಗಿರಬೇಕು ಎಂಬ ಕಾರಣಕ್ಕೆ ಸಿನಿಮಾ ಮಾಡಿದೆ.
ನಂತರ ಹಣ ಗಳಿಸಿ, ಮನೆಯವರಿಗಾಗಿ ಅನೇಕ ವಸ್ತುಗಳನ್ನು ಖರೀದಿಸಿದೆ. ಆದರೆ ಎಲ್ಲರೂ ನನಗೆ ಮೊಸ ಮಾಡಿದರು. ನನ್ನವರಿಂದಲೇ ನನಗೆ ದ್ರೋಹ ಆಯಿತು. ಆದರೆ ನೀಲಿಚಿತ್ರಗಳನ್ನು ಮಾಡಿದೆ ಎಂಬ ಬಗ್ಗೆ ನನಗೆ ವಿಷಾದ ಇಲ್ಲವೇ ಇಲ್ಲ. ಅದರ ಬಗ್ಗೆ ನನಗೆ ಖುಷಿ ಇದೆ.
Be the first to comment