ಅಭಿಷೇಕ್ ಬಸಂತ್ ನಿರ್ದೇಶನದಲ್ಲಿ ಮೂಡಿಬಂದಿರುವ ಮಹಿಳಾ ಪ್ರಧಾನ ಚಿತ್ರ “ಕ್ರೀಂ” ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ.
ಅಗ್ನಿ ಶ್ರೀಧರ್ ಅವರು ಕಥೆ ಹಾಗೂ ಸಂಭಾಷಣೆ ಬರೆದಿರುವ ಈ ಚಿತ್ರದಲ್ಲಿ ಸಂಯುಕ್ತ ಹೆಗಡೆ ನಾಯಕಿಯಾಗಿದ್ದಾರೆ. ಅಚ್ಯುತಕುಮಾರ್, ಅರುಣಸಾಗರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಿ.ಕೆ. ದೇವೇಂದ್ರ ಚಿತ್ರ ನಿರ್ಮಾಣ ಮಾಡಿದ್ದಾರೆ.
ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಸದ್ಯ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಎಂದು ನಿರ್ದೇಶಕ ಅಭಿಷೇಕ್ ಬಸಂತ್ ಹೇಳಿದ್ದಾರೆ.
“ಕ್ರೀಂ” ಎಂದರೆ ಕಾಳಿ ಮಾತೆಯನ್ನು ಆರಾಧಿಸುವ ಬೀಜಾಕ್ಷರಿ ಮಂತ್ರ. ದೇಶದಲ್ಲಿ ಪ್ರತಿ ತಿಂಗಳು ೪೦೦ಕ್ಕೂ ಹೆಚ್ಚು ಮಹಿಳೆಯರ ಹತ್ಯೆಯಾಗುತ್ತಿದೆ. ಮಕ್ಕಳೂ ಕಣ್ಮರೆಯಾಗುತ್ತಿದ್ದಾರೆ. ಈ ಪ್ರಕರಣಗಳ ಹಿಂದೆ ಯಾರಿದ್ದಾರೆ? ಯಾಕೆ ಮಾಡುತ್ತಿದ್ದಾರೆ? ಎನ್ನುವ ಅಂಶವನ್ನಿಟ್ಟುಕೊಂಡು ಕಥೆ ಬರೆದಿದ್ದೇನೆ. ಸಂಯುಕ್ತ ಹೆಗಡೆ ಅವರದು ಇದರಲ್ಲಿ ವೇಶ್ಯೆಯ ಪಾತ್ರ. ಈ ಚಿತ್ರದ ಬಗ್ಗೆ ಕೆಲವು ವಿವಾದಗಳು ಬರಬಹುದು. ಎದುರಿಸಲು ನಾನು ಸಿದ್ದನಿದ್ದೇನೆ ಎಂದು ಕಥೆ ಹಾಗೂ ಸಂಭಾಷಣೆ ಬರೆದಿರುವ ಅಗ್ನಿ ಶ್ರೀಧರ್ ತಿಳಿಸಿದ್ದಾರೆ.
ಚಿತ್ರೀಕರಣ ಸಮಯದಲ್ಲಿ ಕಾಲಿಗೆ ತೀವ್ರವಾದ ಪೆಟ್ಟಾಯಿತು. ನಾನು ಎರಡು ತಿಂಗಳು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆದಿದ್ದು ಇದೇ ಮೊದಲ ಬಾರಿ. ಫಿಸಿಯೋ ಥೆರಪಿ ಮಾಡಿಸಿಕೊಳ್ಳಬೇಕಾದರೆ ನಾನು ಪಟ್ಟ ನೋವು ಅಷ್ಟಿಷ್ಟಲ್ಲ. ಈ ಚಿತ್ರಕ್ಕಾಗಿ ನಾನು ಬೆವರು ಮಾತ್ರ ಹರಿಸಿಲ್ಲ. ರಕ್ತವನ್ನು ಹರಿಸಿದ್ದೇನೆ. ಇಷ್ಟೆಲ್ಲ ಶ್ರಮಪಟ್ಟು ಒಂದೊಳ್ಳೆಯ ಸಿನಿಮಾದಲ್ಲಿ ನಟಿಸಿದ ತೃಪ್ತಿಯಿದೆ ಎಂದು ಸಂಯುಕ್ತ ಹೆಗಡೆ ಹೇಳಿದ್ದಾರೆ.
—–
Be the first to comment