ಶ್ರೀಕೃಷ್ಣ ಆರ್ಟ್ಸ್ & ಕ್ರಿಯೇಷನ್ಸ್ ಲಾಂಛನದಲ್ಲಿ ಅಜೇಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ “ಯುದ್ಧಕಾಂಡ” ಚಿತ್ರದ ಟ್ರೇಲರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಬಿಡುಗಡೆ ಮಾಡಿದರು. ಪಾಂಚಜನ್ಯ ಮೊಳಗಿಸಿ ಚಾಲನೆ ನೀಡಿದರು. ನಂತರ ಅತಿಥಿಗಳಾಗಿ ಆಗಮಿಸಿದ್ದ ರವಿಚಂದ್ರನ್ ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಾನು ಬರುವಾಗ ಅಜೇಯ್ ರಾವ್ ಅವರ ಒಂದಿಷ್ಟು ಸಂದರ್ಶನಗಳನ್ನು ನೋಡಿಕೊಂಡು ಬಂದೆ. ಕೆಲವು ಸಂದರ್ಶನಗಳಲ್ಲಿ ಸಾಲ ಮಾಡಿದ್ದೇನೆ ಎಂದು ಅಜೇಯ್ ಹಲವು ಬಾರಿ ಹೇಳಿಕೊಂಡಿದ್ದಾರೆ. ಅದನ್ನು ಕೇಳಿ ನನಗೆ ನನ್ನ ಸಾಲದ ನೆನಪಾಯಿತು. ಇಲ್ಲಿ ಸಾಲ ತೀರಿಸುವ ತಾಕತ್ತು ಬೇಕು. ನಾನು ಕೋಟಿಗಟ್ಟಲೆ ಹಾಕಿ ಸಿನಿಮಾ ಮಾಡಿದವನು. ನನಗೆ ದುಡ್ಡು ದುಡ್ಡಿನ ಬೆಲೆ ಆಗಲೂ ಗೊತ್ತಿಲ್ಲ. ಈಗಲೂ ಗೊತ್ತಿಲ್ಲ. ನನಗೆ 100 ಡ್ಯಾನ್ಸರ್ಸ್ ಬೇಕು, 100 ಫೈಟರ್ಸ್ ಬೇಕು ಎಂದು ಹೇಳಿಬಿಡುತ್ತಿದೆ. ಅಪ್ಪ ಎಲ್ಲಿಂದ ಹಣ ತರುತ್ತಿದ್ದರು ಅಂತ ನನಗೆ ಗೊತ್ತಿಲ್ಲ. ಒಂದು ದಿವಸ ಅವರು ಇಲ್ಲದಾಗ ಅದರ ಗೊತ್ತಾಯಿತು. ದುಡ್ಡಿಲ್ಲದಿದ್ದರೂ ಇಲ್ಲಿ ಕನಸು ಮುಖ್ಯ. ಎಷ್ಟು ದುಡ್ಡಿದೆಯೋ, ಅಷ್ಟರಲ್ಲಿ ಸಿನಿಮಾ ಮಾಡುವುದನ್ನು ಕಲಿಯಬೇಕು. ಇಲ್ಲಿ ಕಂಟೆಂಟ್ ಮುಖ್ಯ, ಏನು ಹೇಳುತ್ತಿದ್ದೀವಿ ಅನ್ನೋದು ಮುಖ್ಯ. ನಿಮ್ಮ ಚಿತ್ರತಂಡ ನೋಡಿದರೆ, ನಿಮ್ಮಲ್ಲಿ ಶ್ರದ್ಧೆ ಕಾಣುತ್ತಿದೆ. ನಿಮ್ಮ ತಂಡದಲ್ಲಿ ಒಂದು ತೃಪ್ತಿ ಮತ್ತು ಆತ್ಮವಿಶ್ವಾಸವಿದೆ. ನೀವು ಇಷ್ಟೆಲ್ಲಾ ಮಾಡಿ ಸಿನಿಮಾ ಮಾಡಿದ್ದೀರಾ. ನಾನು ಪ್ರೇಕ್ಷಕನಾಗಿ ಸಿನಿಮಾ ನೋಡುತ್ತೇನೆ. ಈಗಲೇ ಐದು ಗೋಲ್ಡ್ ಕ್ಲಾಸ್ ಟಿಕೆಟ್ ತೆಗೆದುಕೊಳ್ಳುತ್ತೇನೆ. ಸಿನಿಮಾ ನೋಡಿ ಫೋನ್ ಮಾಡುತ್ತೇನೆ ಎಂದರು ಕ್ರೇಜಿಸ್ಟಾರ್ ರವಿಚಂದ್ರನ್.
ರವಿಚಂದ್ರನ್ ನಮ್ಮ ತಂದೆ, ಅಣ್ಣನ ಸ್ಥಾನದಲ್ಲಿದ್ದಾರೆ. ನಾನು ‘ಕೃಷ್ಣ ಲೀಲಾ’ ಚಿತ್ರ ಮಾಡಿದಾಗ, ಆ ಚಿತ್ರದ ಕಲೆಕ್ಷನ್ ಇಳಿಯುತ್ತಿತ್ತು. ರವಿಚಂದ್ರನ್ ಅವರು ತಾವಾಗಿ ಬಂದು ಸಿನಿಮಾ ನೋಡಿ, ನಮ್ಮನ್ನ ಮನೆಗೆ ಕರೆದು ಒಂದಿಷ್ಟು ವಿಚಾರಗಳನ್ನು ಹೇಳಿದರು. ಸಿನಿಮಾ ಬಗ್ಗೆ ನಮಗೆ ಗೊತ್ತಿಲ್ಲದ ಒಂದಿಷ್ಟು ವಿಚಾರಗಳನ್ನು ಹೇಳಿದರು. ಆ ನಂತರ ಕಲೆಕ್ಷನ್ ಕ್ರಮೇಣ ಹೆಚ್ಚಾಯಿತು. ನಾನು ‘ಯುದ್ಧಕಾಂಡ’ ಮಾಡುವಾಗ ಮೊದಲು ಹೋಗಿ ಅವರ ಬಳಿ ಶೀರ್ಷಿಕೆ ಕೇಳಿದೆ. ಅವರು ಆಶೀರ್ವಾದ ಮಾಡಿ ಕಳಿಸಿದರು. ಈ ಚಿತ್ರದ ಪ್ರತಿಯೊಂದು ದೃಶ್ಯ ಮಾಡುವಾಗಲೂ, ನಾನು ಸೋಲಬಾರದು ಅಂತ ಹೆದರಿಕೊಂಡು ಸಿನಿಮಾ ಮಾಡಿದ್ದೇನೆ. ನಾನು ಜೀವನಪೂರ್ತಿ ಅವರ ತರಹ ಕನಸುಗಾರನಾಗಿ, ಹಠವಾದಿಯಾಗಿ ಅವರನ್ನು ಕಾಪಿ ಮಾಡಿಕೊಂಡಿರಲು ಇಷ್ಟಪಡುತ್ತೇನೆ. ಅವರು ಚಿತ್ರದ ಮೊದಲ ಐದು ಟಿಕೆಟ್‍ಗಳನ್ನು ಖರೀದಿಸಿದ್ದಾರೆ. ಈ ಚಿತ್ರ ನಿಜಕ್ಕೂ ದಾಖಲೆ ಮಾಡುತ್ತದೆ ಎಂಬ ನಂಬಿಕ ಇದೆ. ಈ ಚಿತ್ರದ ನಂತರ ಇನ್ನಷ್ಟು ಚಿತ್ರಗಳನ್ನು ಮಾಡುತ್ತೇನೆ ಮತ್ತು ಕನ್ನಡ ಚಿತ್ರಗಳನ್ನೇ ಮಾಡುತ್ತೇನೆ. ಆದರೆ ಸಾಲ ಮಾಡಲ್ಲ ಎಂದು ನಿರ್ಮಾಪಕ & ನಾಯಕ ಅಜೇಯ್ ರಾವ್ ತಿಳಿಸಿದರು.
“ಯುದ್ಧ ಕಾಂಡ” ಚಿತ್ರದಲ್ಲಿ ಕಥೆಯಲ್ಲಿ ಎಲ್ಲಾ ಪಾತ್ರಗಳು ಪ್ರಮುಖ ಪಾತ್ರಗಳೆ. ನಾಯಕ ಪ್ರಧಾನ ಚಿತ್ರವಲ್ಲ. ಹಾಗೆ ಹೇಳಬೇಕಾದರೆ, ಚಿತ್ರದ ಶೇಕಡಾ 35% ಅಜೇಯ್ ರಾವ್ ಅವರು ಈ ಚಿತ್ರದಲ್ಲಿ ಇರುವುದಿಲ್ಲ. ಆದರೂ ಅವರು ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಇಡೀ ತಂಡಕ್ಕೆ ಹಾಗೂ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ರವಿಚಂದ್ರನ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ದೇಶಕ ಪವನ್ ಭಟ್.
ನಾಯಕಿ ಅರ್ಚನಾ ಜೋಯಿಸ್ ಮಾತನಾಡಿ, ಈ ಚಿತ್ರದಲ್ಲಿ ನನ್ನದು ನೊಂದ ಹೆಣ್ಣುಮಕ್ಕಳನ್ನು ಪ್ರತಿನಿಧಿಸುವ ಪಾತ್ರ ಎಂದರು.
ನ್ಯಾಯಾಧೀಶರ ಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದ ನಟ ಟಿ.ಎಸ್.ನಾಗಾಭರಣ, ಚಿತ್ರತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದರು.

Be the first to comment