ಕರೋನವೇ ಮೈಮರೆತು ಹೋಗುವಂಥ ಚೆಲುವೆ ಇಶಾನಾ..!

 

ಈ ಚೆಲುವೆಯ ಹೆಸರು ಇಶಾನ. ಪೂರ್ತಿಯಾಗಿ ಹೇಳುವುದಾದರೆ ಇಶಾನಾ ಸಣ್ಣಪ್ಪನವರ್. ಹೆಸರೇ ಸೂಚಿಸುವಂತೆ ಹುಟ್ಟಿದ್ದು ಇಳಕಲ್ ನಲ್ಲಿ. ಆದರೆ ಬೆಳೆದಿದ್ದು ಬೆಂಗಳೂರಲ್ಲಿ. ಸೈಂಟ್ ಮೆರೀಸ್ ಕಾನ್ವೆಂಟಲ್ಲಿ ವಿದ್ಯಾರಾಂಭ. ಇಂಟರ್ನ್ಯಾಶನಲ್ ಸ್ಕೂಲ್ ಆಫ್ ಬಿಸ್ನೆಸ್ ನಲ್ಲಿ ಗ್ರ್ಯಾಜುಯೇಶನ್. ಮಾಡೆಲಿಂಗ್ ಕ್ಷೇತ್ರದಲ್ಲಿ ಕಂಗೊಳಿಸುತ್ತಿರುವ ಈ ಬೆಡಗಿಗೆ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳುವ ಹಂಬಲ.

ಬಾಲ್ಯದಿಂದಲೇ ನಟಿಯಾಗಬೇಕೆನ್ನುವ ಕನಸು. ಆದರೆ ಇತ್ತೀಚೆಗೆ ಅದು ನನಸಾಗುವ ಸಂದರ್ಭ ಬಂದಿದೆ. ತಮಿಳಿನ ಜನಪ್ರಿಯ ನಟ ಸಿಂಬು ಯಾನೇ ಸಿಲಂಬರಸನ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸುವ ಸಾಧ್ಯತೆ ದಟ್ಟವಾಗಿದೆ. ಆಡಿಶನ್ ಒ.ಕೆಯಾಗಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಈ ಕನ್ನಡದ ಕುವರಿಯ ಪ್ರಥಮ ಚಿತ್ರ ತಮಿಳು ಆಗಲಿದೆ. ಅಚ್ಚ ಕನ್ನಡತಿಯಾದರೂ ಅದರ ಜತೆಯಲ್ಲೇ ಹಿಂದಿ, ಇಂಗ್ಲಿಷ್ ಚೆನ್ನಾಗಿ ಬರುತ್ತದೆ. ಮಲಯಾಳಂ ತಕ್ಕಮಟ್ಟಿಗೆ ಅರ್ಥವಾಗುತ್ತದೆ ಎನ್ನುವುದು ಈಕೆಯ ಪ್ರಮುಖ ಪಾಸಿಟಿವ್ ಅಂಶ. ಇಶಾನಾಗೆ ಎಲ್ಲರಂತೆ ಹುಟ್ಟಿದ ಊರು ಅಂದರೆ ತುಂಬ ಇಷ್ಟ. ತಮ್ಮ ಪ್ರೀತಿಯ ನೆನಪುಗಳೆಲ್ಲ ಅಲ್ಲಿಯೇ ಇದೆ ಎನ್ನುತ್ತಾರೆ. “ಇಳಕಲ್ ಎಂದೊಡನೆ ಎಲ್ಲರಿಗೂ ಇಳಕಲ್ ಸೀರೆ ನೆನಪಾಗುವುದು ಸಹಜ. ನನಗೂ ಇಳಕಲ್ ಸೀರೆ ಇಷ್ಟ. ಸ್ಪೈಸಿ ಆಹಾರ ಪದಾರ್ಥ ಎಂದರೆ ನನಗೆ ತುಂಬ ಇಷ್ಟ. ಹಿಂಡಿ ನಮ್ಮ ಕಡೆ ತುಂಬ ಜನಪ್ರಿಯ ಆಹಾರ” ಎಂದು ನಗುತ್ತಾರೆ ಇಶಾನ.

ನಟಿ ಕರೀನಾ ಕಪೂರ್ ಅಂದರೆ ಇವರಿಗೆ ತುಂಬ ಇಷ್ಟ. ‘ಆಕೆ ಮಾಡುವಂಥ ಎಲ್ಲ ಪಾತ್ರಗಳು ಕೂಡ ನನಗೆ ಬಲು ಅಚ್ಚುಮೆಚ್ಚು. ಆಕೆಯಂತೆ ಜನ ನನ್ನನ್ನು ಪಾತ್ರಗಳ ಮೂಲಕ ನೆನಪಿರಿಸಿಕೊಳ್ಳುವಂಥ ನಟಿಯಾಗಬೇಕು ಎನ್ನುವುದು ನನ್ನ ಆಸೆ’ ಎನ್ನುವ ಇಶಾನ, ಕಳೆದ ಒಂದು ವರ್ಷದಿಂದ ಸಂಪೂರ್ಣವಾಗಿ ಅದರ ತಯಾರಿಯಲ್ಲಿದ್ದಾರೆ. ಡಾಕ್ಟರ್ ವೃತ್ತಿಯಲ್ಲಿರುವ ತಂದೆ ಸಂಪೂರ್ಣವಾಗಿ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ತಾಯಿ ಮತ್ತು ತಮ್ಮ ಕೂಡ ಬೆಂಬಲ ನೀಡುತ್ತಿದ್ದಾರೆ.

ಅಂದಹಾಗೆ ಇಶಾನಳ ಚಿತ್ರರಂಗದ ಕನಸು ನನಸಾಗತೊಡಗಿದ್ದು ಭರತ್ ಎನ್ನುವ ತಮಿಳು ನಿರ್ದೇಶಕರ ಮೂಲಕ. ಮೊದಲು ಅವರ ಬಳಿ ವಿದ್ಯಾರ್ಥಿನಿಯಾಗಿದ್ದೆ ಎನ್ನುವ ಇಶಾನ, ಬಳಿಕ ಅವರು ರೆಫರ್ ಮಾಡಿದಂತೆ ಚಾಮರಾಜ ಮೇಷ್ಟ್ರ ಬಳಿಗೆ ಹೋಗಿದ್ದರು. ಅಲ್ಲಿ ಕೋರ್ಸ್ ಮುಗಿಸಿದ ಮೇಲೆ ಡಾನ್ಸ್, ಜಿಮ್ನಾಸ್ಟಿಕ್ ಎಲ್ಲವನ್ನೂ ಮುಂದುವರಿಸಿಕೊಂಡೇ ಬಂದಿದ್ದಾರೆ. ಚಿತ್ರರಂಗದಲ್ಲಿ ಯಾವುದೇ ಗಾಡ್ ಫಾದರ್ ಇಲ್ಲದೆ ಇದ್ದರೂ ನಾಯಕಿಯಾಗಲೇಬೇಕು ಎನ್ನುವ ಮಹತ್ವಾಕಾಂಕ್ಷೆ ಈಕೆಯದು. ಆಕ್ಟಿಂಗ್, ಡ್ಯಾನ್ಸ್, ಜಿಮ್ನಾಸ್ಟಿಕ್ ಎಲ್ಲವನ್ನು ಕಲಿತಿರುವ ಈ ಸುಂದರಿ ಒಂದೊಳ್ಳೆಯ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಸಿನಿಮಾದಲ್ಲಿ ತನ್ನ ಪಾತ್ರ ಸಾಯೋದಾದರೂ ಇಷ್ಟವೇ. ಆದರೆ ಪ್ರೇಕ್ಷಕರ ಮನದೊಳಗೆ ಸದಾ ಬದುಕಿರಬೇಕು. ಯಾರೇ ನೋಡಿದರೂ ಓ ನಮ್ಮನೆ ಹುಡುಗಿಯೇ ಇವಳು ಎಂದುಕೊಳ್ಳುವಂತಿರಬೇಕು ಎನ್ನುವ ಕನಸು ಕಟ್ಟಿರುವ ಇಶಾನಾಗೆ ನಾವು ಶುಭ ಕೋರೋಣ.

This Article Has 3 Comments
  1. Pingback: Digital transformation solutions

  2. Pingback: codeless software

  3. Pingback: sexism documentary

Leave a Reply

Your email address will not be published. Required fields are marked *

Translate »
error: Content is protected !!