ಎಂಜಿಆರ್ ವಿರುದ್ಧ ವಿವಾದಾತ್ಮಕ ಹೇಳಿಕೆ

ಟಾಲಿವುಡ್ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಖ್ಯಾತ ನಟ ಎಂಜಿ ರಾಮಚಂದ್ರನ್ ಅವರ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ತೆಲುಗಿನ ಹಿರಿಯ ನಟ, ನಿರ್ಮಾಪಕ ಕಾಂತಾರಾವ್ ಅವರ ಗೌರವಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ರಾಜೇಂದ್ರ ಪ್ರಸಾದ್, ಕಾಂತಾರಾವ್ ಅವರ ನಟನೆಯನ್ನು ನೋಡಿ ಎಂಜಿಆರ್ ಹೆದರುತ್ತಿದ್ದರು. ಅವರ ಪ್ಯಾಂಟ್ ಒದ್ದೆಯಾಗುತ್ತಿತ್ತು ಎಂದು ಹೇಳಿದ್ದರು. ಈ ಹೇಳಿಕೆ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ತಮಿಳು ಜನರು ಎಂಜಿಆರ್ ಅವರನ್ನು ದೇವರಂತೆ ಪೂಜಿಸುತ್ತಾರೆ. ತಲೈವರ್ ಎಂದು ಕರೆಯುತ್ತಾರೆ. ಈಗ ಇಂಥ ಹೇಳಿಕೆ ನೀಡಿದ್ದಕ್ಕಾಗಿ ರಾಜೇಂದ್ರ ವಿರುದ್ಧ ತಮಿಳಿಗರು ಕೋಪಗೊಂಡಿದ್ದಾರೆ.

ರಾಜೇಂದ್ರ ಪ್ರಸಾದ್ ದೊಡ್ಡ ವ್ಯಕ್ತಿಯಾಗಿದ್ದರೂ ಮತ್ತೊಬ್ಬ ಹಿರಿಯ ನಟನ ವಿರುದ್ಧ ಕೆಟ್ಟ ಹೇಳಿಕೆ ನೀಡಿದ್ದರೆ ಎಂದು ಅಭಿಮಾನಿಗಳು ಟೀಕಿಸುತ್ತಿದ್ದಾರೆ. ಈ ಹಿಂದೆ ಬ್ರಹ್ಮಾನಂದಂ, ಅಲಿಯಂಥ ಸಹ ನಟರ ವಿರುದ್ಧ ರಾಜೇಂದ್ರ ಬಾಬು ಹೇಳಿಕೆಗಳನ್ನು ನೀಡಿದ್ದರು. ಈಗ ಎಂಜಿಆರ್ ಅವರ ವಿರುದ್ದ ಹೇಳಿಕೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತೀಯ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ನಟ ವಿಶಾಲ್ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರ ಹೇಳಿಕೆ ಆಘಾತ ತಂದಿದೆ. ಒಬ್ಬ ನಟ ಮತ್ತೊಬ್ಬ ನಟನನ್ನು ಹೊಗಳುವುದು ಒಳ್ಳೆಯದು. ಆದರೆ ಇನ್ನೊಬ್ಬ ದಂತಕಥೆಯನ್ನು ಕೀಳಾಗಿ ಕಾಣುವುದು ಸರಿಯಲ್ಲ. ದಯವಿಟ್ಟು ಇದಕ್ಕೆ ಕ್ಷಮೆಯಾಚಿಸಿ ಈ ವಿವಾದಕ್ಕೆ ತೆರೆ ಎಳೆಯಿರಿ ಎಂದು ಆಗ್ರಹಿಸಿದ್ದಾರೆ.

ತಮಿಳುನಾಡಿನ ನಟರ ಸಂಘದ ಅಧ್ಯಕ್ಷ ನಾಸರ್ ವಿಡಿಯೋ ಸಂದೇಶದ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂತಾರಾವ್ ಅವರನ್ನು ಹೊಗಳಿದ್ದು ಕೇಳಿ ಖುಷಿಯಾಯಿತು. ಆದರೆ ಎಂಜಿಆರ್ ಅವರ ಬಗ್ಗೆ ನೀವು ಹೇಳಿದ್ದು ನನಗೆ ನೋವು ತಂದಿದೆ. ಎಂಜಿಆರ್ ಅವರು ಎನ್.ಟಿ.ಆರ್ ಆಪ್ತರಾಗಿದ್ದರು. ಯಾವುದೇ ರಾಜಕೀಯವಿಲ್ಲದೆ ನಾವು ಅವರನ್ನು ಗೌರವಿಸುತ್ತೇವೆ. ಹೀಗಾಗಿ ದಯವಿಟ್ಟು ಕ್ಷಮೆಯಾಚಿಸಿ ಎಂದು ಮನವಿ ಮಾಡಿದ್ದಾರೆ.

ರಾಜೇಂದ್ರ ಪ್ರಸಾದ್ ಈ ಬಗ್ಗೆ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಾಗಿದೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!