ಚಿತ್ರ: ಕಂಗ್ರಾಜುಲೇಶನ್ಸ್ ಬ್ರದರ್
ನಿರ್ದೇಶಕರು: ಪ್ರತಾಪ್ ಗಂಧರ್ವ
ನಿರ್ಮಾಪಕರು: ಪ್ರಶಾಂತ್ ಕಲ್ಲೂರು, ಹರೀಶ್ ಮತ್ತು ರವಿಕುಮಾರ್
ತಾರಾಗಣ: ರಕ್ಷಿತ್ ನಾಗ್, ಸಂಜನಾ ದಾಸ್, ಅನುಷಾ, ಶಶಿಕುಮಾರ್ ಮುಂತಾದವರು.
ರೇಟಿಂಗ್: 4/5
ಒಂದು ತಾಳಿ ಕಟ್ಟಿದ ಬಳಿಕ ಪಡ್ಡೆ ಹುಡುಗರ ಪಾಲಿಗೆ ಬ್ಯಾಚುಲರ್ ಬದುಕು ಬದಲಾಗುವ ರೀತಿಯೇ ಭಯಾನಕ. ಆದರೆ ಅಂಥದೇ ಹುಡುಗನೊಬ್ಬನಿಗೆ ಒಂದೇ ಬಾರಿ ಎರಡೆರಡು ತಾಳಿ ಕಟ್ಟುವ ಆಫರ್ ಎದುರಾದರೆ ಹೇಗಿರಬಹುದು? ಇಂಥದೊಂದು ಕಲ್ಪನೆಗೆ ಪರದೆ ಮೇಲೆ ರೂಪ ನೀಡಿರುವ ಚಿತ್ರ ಕಂಗ್ರಾಜುಲೇಶನ್ಸ್ ಬ್ರದರ್.
ಕಥಾ ನಾಯಕ ಐಟಿ ಸಂಸ್ಥೆಯಲ್ಲಿ ಉದ್ಯೋಗಿ. ಹೆಸರು ರಕ್ಷಿತ್. ಜತೆಯಲ್ಲೇ ವೃತ್ತಿಯಲ್ಲಿರುವ ಮೂವರು ಈತನ ಆತ್ಮೀಯ ಸ್ನೇಹಿತರು. ಆದರೆ ಯಾವತ್ತೂ ಗರ್ಲ್ ಫ್ರೆಂಡ್ ಸಹವಾಸಕ್ಕೆ ಹೋಗಿರದ ಈತನಿಗೆ ಕಚೇರಿಗೆ ಬಂದ ಹೊಸ ಹುಡುಗಿ ಸಿರಿಯ ಮೇಲೆ ಕ್ರಶ್ ಶುರುವಾಗುತ್ತದೆ. ಅದು ಪ್ರೇಮವಾದಾಗ ಆಕೆಯೊಂದಿಗೆ ಹಂಚಿಕೊಳ್ಳುತ್ತಾನೆ. ಆದರೆ ಆಕೆ ನೀಡುವ ಪ್ರತಿಕ್ರಿಯೆ ಕೇಳಿ ಬೆಚ್ಚಿ ಬೀಳುತ್ತಾನೆ. ಆಕೆಯ ಪ್ರಕಾರ ರಕ್ಷಿತ್ ಸಿರಿಯ ಜತೆಗೆ ಸಿರಿಯ ಆಪ್ತ ಗೆಳತಿ ತನುವನ್ನು ಕೂಡ ಮದುವೆ ಆಗಬೇಕಾಗಿರುತ್ತದೆ. ಇಂಥದೊಂದು ಷರತ್ತಿಗೆ ರಕ್ಷಿತ್ ಒಪ್ಪಿಕೊಳ್ಳುತ್ತಾನ? ಹಾಗೆ ಒಪ್ಪಿಕೊಂಡಾಗ ಎದುರಾಗುವ ಸಮಸ್ಯೆಗಳೇನು ಎನ್ನುವುದೇ ಈ ಚಿತ್ರದ ಕಥಾ ಹಂದರ.
ಮೇಲ್ನೋಟಕ್ಕೆ ಇದು ಯುವ ಪ್ರೇಕ್ಷಕರಿಗೆಂದೇ ಸಿದ್ಧಪಡಿಸಲಾದ ಕಥೆಯಾಗಿ ಮೂಡಿ ಬಂದಿದೆ. ಆದರೆ ರಕ್ಷಿತ್ ಮತ್ತು ಸಿರಿಯ ಹಿನ್ನೆಲೆಯಾಗಿ ಮೂಡಿ ಬರುವ ಘಟನೆಗಳು ಕೌಟುಂಬಿಕ ಸಂಬಂಧದ ಆಳವನ್ನು ಪ್ರಸ್ತುತ ಪಡಿಸುತ್ತವೆ. ತಾಯಿಯನ್ನು ಕಳೆದುಕೊಂಡ ರಕ್ಷಿತ್ ಅದೇ ಕಾರಣದಿಂದ ತಂದೆಯ ಮೇಲೆ ಸಿಟ್ಟಾಗುವುದು ಕೋಪವನ್ನು ನಿರಂತರವಾಗಿ ಉಳಿಸಿಕೊಳ್ಳುವುದು ಮುಂದೇನಾಗಲಿದೆ ಎನ್ನುವ ಪ್ರಶ್ನೆ ಮೂಡಿಸುತ್ತದೆ. ಬಾಲ್ಯದಲ್ಲೇ ಅನಾಥೆಯಾಗಿ ಬೆಳೆದ ಸಿರಿ ತನ್ನ ಸ್ನೇಹಿತೆ ಅನುವಿನ ಮೇಲೆ ಇಟ್ಟಿರುವ ಅಪಾರವಾದ ಕಾಳಜಿಗೆ ಕಾರಣವೇನು ಎನ್ನುವುದನ್ನು ಕೂಡ ಒಂದು ಕರುಣಾಜನಕ ಫ್ಲ್ಯಾಶ್ ಬ್ಯಾಕ್ ಮೂಲಕ ಅನಾವರಣಗೊಳಿಸಲಾಗಿದೆ.
ರಕ್ಷಿತ್ ಪಾತ್ರದಲ್ಲಿ ಕಿರುತೆರೆ ನಟ ರಕ್ಷಿತ್ ಪಾತ್ರಕ್ಕೆ ಬೇಕಾದಂತೆ ನಟಿಸಿದ್ದಾರೆ. ಸಿರಿಯಾಗಿ ಸಂಜನಾ ದಾಸ್ ಅಭಿನಯ ನೆನಪಲ್ಲಿ ಉಳಿಯುವಂತೆ ಇದೆ. ಸ್ನೇಹಿತೆ ತನು ಪಾತ್ರವನ್ನು ಅನುಷಾ ಅದ್ಭುತವಾಗಿ ನಿಭಾಯಿಸಿದ್ದಾರೆ. ಚೆಲುವೆಯ ಬಾಯಲ್ಲಿ ಬರುವ ಬೈದಾಟ ನೋಡಿದ ಪ್ರೇಕ್ಷಕ ಬೆರಗಾಗಿ ಬಿಡುತ್ತಾನೆ. ರಕ್ಷಿತ್ ಫ್ರೆಂಡ್ಸ್ ಪಾತ್ರದಲ್ಲಿ ಚೇತನ್ ದುರ್ಗಾ ನಟನೆ ನಗು ತರಿಸುತ್ತದೆ. ಐಟಿ ಆಫೀಸ್ ಬಾಸ್ ಆಗಿ ರಘು ರಾಮನಕೊಪ್ಪ ನಗಿಸುತ್ತಾರೆ.
ಹರಿ ಸಂತೋಷ್ ಸಂಭಾಷಣೆ ಲವಲವಿಕೆಯಿಂದೆ. ಮನರಂಜನೆಗೆಂದು ಚಿತ್ರಮಂದಿರಕ್ಕೆ ಬರುವವರಿಗೆ ಆರಂಭದಿಂದ ಕೊನೆಯ ತನಕ ನಗುವಿನ ಹಬ್ಬವೇ ಇಲ್ಲಿದೆ.





Be the first to comment