ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಹೈದರಾಬಾದ್ನಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ನಿರ್ಮಾಣ ಸಂಸ್ಥೆಯ ಮಾಲಿಕರು ವರ್ಮಾ ವಿರುದ್ಧ ದೂರು ನೀಡಿದ್ದಾರೆ. 56 ಲಕ್ಷ ರೂಪಾಯಿ ಸಾಲ ಪಡೆದು ವಂಚಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಬಗ್ಗೆ ಮಿಯಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಮ್ ಗೋಪಾಲ್ ವರ್ಮಾ ಅವರನ್ನು ಸ್ನೇಹಿತರ ಮೂಲಕ 2019ರಲ್ಲಿ ದೂರುದಾರರು ಭೇಟಿಯಾಗಿದ್ದರು. ಬಳಿಕ ಆರ್ಜಿವಿ 2020ರಲ್ಲಿ ತೆಲುಗು ಚಿತ್ರ ‘ದಿಶಾ’ಗಾಗಿ 8 ಲಕ್ಷ ರೂ. ಸಾಲವನ್ನು ಪಡೆದಿದ್ದರು. ಬಳಿಕ ಚೆಕ್ ಮೂಲಕ ರಾಮ್ ಗೋಪಾಲ್ ವರ್ಮಾ ಮತ್ತೆ 20 ಲಕ್ಷ ರೂ. ಕೇಳಿದ್ದರು. ಆರು ತಿಂಗಳೊಳಗೆ ಸಾಲ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು. ನಂತರ ಚಿತ್ರಕ್ಕೆ ಹಣ ಸಹಾಯ ಬೇಕಾಗಿದೆ ಎಂದು ಮುಂದಿನ ತಿಂಗಳು ಮತ್ತೆ 28 ಲಕ್ಷ ರೂ. ಹಣ ಕೇಳಿದ್ದರು ಎಂದು ದೂರುದಾರರು ಆರೋಪಿಸಿದ್ದಾರೆ.
ದಿಶಾ ಚಿತ್ರದ ರಿಲೀಸ್ಗೂ ಮುನ್ನ ಒಟ್ಟು 56 ಲಕ್ಷ ರೂ.ಗಳನ್ನು ಮರಳಿಸುವುದಾಗಿ ಆರ್ಜಿವಿ ಒಪ್ಪಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ ‘ದಿಶಾ’ ಚಿತ್ರದ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಆಗಿರಲಿಲ್ಲ ಎಂದು ತಿಳಿಯಿತು. ಅವರು ನಿರ್ಮಾಪಕರೆಂದು ಸುಳ್ಳು ಹೇಳಿ ಸಾಲ ಪಡೆದಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ವರ್ಮಾ ಕನ್ನಡದ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರ ನಿರ್ದೇಶಿಸಿದ್ದಾರೆ. ಉಪೇಂದ್ರ ನಟನೆಯ ‘ಐ ಆಯಮ್ ಆರ್’ ಚಿತ್ರವನ್ನು ಆರ್ಜಿವಿ ನಿರ್ದೇಶಿಸುತ್ತಿದ್ದು, ಅದು ಇತ್ತೀಚೆಗೆ ಅನೌನ್ಸ್ ಆಗಿದೆ. ಗ್ಯಾಂಗ್ಸ್ಟರ್ ಕತೆಯನ್ನು ಚಿತ್ರ ಹೊಂದಿದೆ.
ವಂಚನೆ ಪ್ರಕರಣದ ಬಗ್ಗೆ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ ನೀಡಿಲ್ಲ. ಪ್ರಕರಣದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಇದುವರೆಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
____
Be the first to comment