‘ಟಾಕ್ಸಿಕ್’ ಚಿತ್ರೀಕರಣಕ್ಕಾಗಿ ಅನಧಿಕೃತವಾಗಿ ಸಿನಿಮಾ ಸೆಟ್ ನಿರ್ಮಿಸಲಾಗಿದೆ ಎಂದು ನಿರ್ಮಾಪಕರ ವಿರುದ್ಧ ದೂರು ನೀಡಲಾಗಿದ್ದು, ಸಂಕಷ್ಟ ಶುರುವಾಗಿದೆ.
ಪೀಣ್ಯ ಪ್ಲಾಂಟೇಶನ್ ಜಮೀನಿನ ಬಳಿ ಸುಮಾರು 20 ಎಕರೆ ಜಾಗದಲ್ಲಿ ‘ಟಾಕ್ಸಿಕ್’ ಸಿನಿಮಾಕ್ಕಾಗಿ ಬೃಹತ್ ಸೆಟ್ ಹಾಕಲಾಗಿದೆ. ಈ ಸೆಟ್ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಹಾಕಲಾಗಿದೆ ಎಂದು ಆರೋಪಿಸಿ ವಕೀಲ ಜಿ. ಬಾಲಾಜಿ ನಾಯ್ಡು ಅವರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದಾರೆ. ಅಕ್ರಮವಾಗಿ ನಿರ್ಮಿಸಲಾಗಿರುವ ಈ ಸೆಟ್ ಅನ್ನು ಕೂಡಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅರ್ಜಿ ವಿಚಾರಣೆಗೆ ಅರ್ಹವೆಂದು ಪರಿಗಣಿಸಿರುವ ಹೈಕೋರ್ಟ್ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಎಚ್ಎಂಟಿ ಸಂಸ್ಥೆಗೆ ನೊಟೀಸ್ ನೀಡಿದೆ. ಕೆಲವು ದಾಖಲೆಗಳ ಪ್ರಕಾರ, ಎಚ್ಎಂಟಿ ಸಂಸ್ಥೆಯು ಈ ಜಮೀನನ್ನು ಕೆನರಾ ಬ್ಯಾಂಕ್ಗೆ ನೀಡಿತ್ತು. ಬಳಿಕ ಕೆನರಾ ಬ್ಯಾಂಕ್, ಕೆವಿಎನ್ಗೆ ನೀಡಿತ್ತು. ಇದೀಗ ಕೆವಿಎನ್ ನವರು 20.07 ಎಕರೆ ಜಾಗವನ್ನು ಸಿನಿಮಾ ಸೆಟ್ ನಿರ್ಮಾಣಕ್ಕೆ ಬಳಸಿಕೊಂಡಿದ್ದಾರೆ. ಆದರೆ ಇದು ಅರಣ್ಯ ಪ್ರದೇಶ ಎಂದು ಅರ್ಜಿದಾರರು ವಾದಿಸಿದ್ದಾರೆ. ವಿಚಾರಣೆ ಬಳಿಕ ಸತ್ಯಾಂಶ ಹೊರ ಬರಲಿದೆ.
ಒಂದೊಮ್ಮೆ ಸೆಟ್ ತೆರವು ಮಾಡಬೇಕು ಎಂದರೆ ಟಾಕ್ಸಿಕ್ ಚಿತ್ರತಂಡಕ್ಕೆ ಭಾರಿ ನಷ್ಟವಾಗಲಿದೆ. ಸಿನಿಮಾ 70-80ರ ಕಾಲದಲ್ಲಿ ನಡೆಯಲಿದೆ. ಇದೇ ಕಾರಣಕ್ಕೆ ಸಿನಿಮಾವನ್ನು ಸೆಟ್ಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.
ʼಕೆಜಿಎಫ್ 2ʼ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಒಂದೂವರೆ ವರ್ಷದ ಬಳಿಕ ಯಶ್ ಅಭಿನಯದ ʼಟಾಕ್ಸಿಕ್ʼ ಸಿನಿಮಾ ಘೋಷಣೆಯಾಗಿದೆ. ಮಲೆಯಾಳಂ ಮೂಲದ ನಟಿ, ನಿರ್ದೇಶಕಿ ಗೀತು ಮೋಹನ್‌ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಟ ಯಶ್ ಮತ್ತು ನಯನತಾರಾ ಮೊದಲ ಬಾರಿಗೆ ಜೊತೆಯಾಗುತ್ತಿದ್ದಾರೆ. ಕಿಯಾರಾ ಆಡ್ವಾಣಿ, ಹುಮಾ ಖುರೇಷಿ ಮತ್ತು ಶ್ರುತಿ ಹಾಸನ್ ಕೂಡ ಇದ್ದಾರೆ ಎನ್ನಲಾಗಿದೆ.
ಬರೋಬ್ಬರಿ 170 ಕೋಟಿ ರೂಪಾಯಿ ಬಜೆಟ್‌ನ ಈ ಚಿತ್ರ ಡ್ರಗ್ ಮಾಫಿಯಾ ಬಗ್ಗೆ ಬೆಳಕು ಚೆಲ್ಲಲಿದೆ. 2025ರಲ್ಲಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದೆ ಎನ್ನಲಾಗಿದೆ.
Be the first to comment