ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಚಿತ್ರದ ‘ಸರ್ಸೆ ನಿನ್ನ ಸೆರಗ’ ಹಾಡಿನ ಸಾಹಿತ್ಯದ ಬಗ್ಗೆ ವಕೀಲ ವಿನೀತ್ ಜಿಂದಾಲ್ ಎಂಬವರು ಸೆನ್ಸಾರ್ ಮಂಡಳಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ದೂರು ನೀಡಿದ್ದಾರೆ.
ದೆಹಲಿ ಪೊಲೀಸರ ಸೈಬರ್ ಸೆಲ್‌ಗೆ ಪ್ರತ್ಯೇಕ ದೂರು ನೀಡಲಾಗಿದೆ. ಅಪ್ರಾಪ್ತರಿಗೂ ಈ ಹಾಡು ಲಭ್ಯವಿರುವುದರಿಂದ ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೋ ಕಾಯ್ದೆಯಡಿ ಕ್ರಮಕ್ಕೆ ಒತ್ತಾಯಿಸಲಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ಬಗ್ಗೆ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದೆ.
ಬಾಲಿವುಡ್ ನಟಿ ನೋರಾ ಫತೇಹಿ ಮತ್ತು ನಟ ಸಂಜಯ್ ದತ್ ಕಾಣಿಸಿಕೊಂಡಿರುವ ‘ಸರ್ಸೆ ನಿನ್ನ ಸೆರಗ’ ಹಾಡು ವಿವಾದಕ್ಕೆ ಗುರಿ ಆಗಿರುವಂತೆಯೇ ಕರ್ನಾಟಕ ಮಹಿಳಾ ಆಯೋಗ, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಸೆನ್ಸಾರ್ ಮಂಡಳಿಗೆ ಪತ್ರ ಬರೆದಿದೆ.
‘ಹೆಣ್ಮಕ್ಕಳು ಅನುಭವಿಸುತ್ತಿರುವ ಪರಿಸ್ಥಿತಿ ಬಹಳ ಕಷ್ಟ ಇದೆ. ಇಂಥ ಹಾಡುಗಳು ಬಂದರೆ ಇನ್ನೂ ಹಗುರವಾಗಿ ಮಾತನಾಡಲು ಶುರು ಮಾಡುತ್ತಾರೆ. ಚಲನಚಿತ್ರ ವಾಣಿಜ್ಯ ಮಂಡಳಿ, ಸೆನ್ಸಾರ್ ಮಂಡಳಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇವೆ. ಆ ಹಾಡನ್ನು ಕೇಳಲು ನನಗೆ ಸಾಧ್ಯವಾಗಲಿಲ್ಲ. ಆರಂಭದ ಕೆಲವು ಸಾಲುಗಳನ್ನು ಕೇಳುವಾಗಲೇ ಮುಜುಗರ ಆಯಿತು’ ಎಂದು ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.
ಸಾಹಿತ್ಯದಲ್ಲಿ ಬಳಸಲಾದ ಪದಗಳು ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುತ್ತವೆ ಎಂದು ಅನೇಕರು ದೂರಿದ್ದಾರೆ. ಹಾಡಿನ ನೃತ್ಯ ಸಂಯೋಜನೆಯ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೋರಾ ಫತೇಹಿ ಅವರು ಸೀರೆಯ ಸೆರಗನ್ನು ಕೆಳಗೆ ಹಾಕಿ ಮತ್ತೆ ಎತ್ತುವ ದೃಶ್ಯಗಳು ಅಸಭ್ಯವಾಗಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಕೇಳಿಬಂದಿದೆ. ಈ ವಿವಾದ ಕಾನೂನು ಹಂತ ತಲುಪಿದೆ.
ಗಾಯಕ ಅರ್ಮಾನ್ ಮಲಿಕ್, ನಟಿ ಕಂಗನಾ ರಣಾವತ್, ಕ್ರಿಕೆಟಿಗ ಹರ್ಭಜನ್ ಸಿಂಗ್ ಸೇರಿದಂತೆ ಹಲವರು ಹಾಡಿನ ಸಾಹಿತ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತೀವ್ರ ವಿರೋಧದ ಹಿನ್ನೆಲೆಯಲ್ಲಿ ಮಾರ್ಚ್ 17ರಂದು ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್‌ನಿಂದ ಡಿಲೀಟ್ ಮಾಡಲಾಗಿದೆ. ಹಿಂದಿ ವರ್ಷನ್ ಡಿಲೀಟ್ ಆಗಿದ್ದರೂ ಕನ್ನಡ ಸೇರಿದಂತೆ ಇತರ ದಕ್ಷಿಣ ಭಾರತದ ಭಾಷೆಗಳಲ್ಲಿ ಈ ಹಾಡು ಇನ್ನೂ ಲಭ್ಯವಿದೆ.





Be the first to comment