ದೀಪಾವಳಿ ಹಬ್ಬದ ಶುಭದಿನವೇ ಇನ್ನೂ ಹೆಸರಿಡದ ಹೊಸ ಕಾಮಿಡಿ ಎಂಟರ್‌ಟೈನರ್ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆದಿದೆ. ಈ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಕಲಾವಿದ, ತಂತ್ರಜ್ಞರೆಲ್ಲರೂ ಬಹುತೇಕ ಹೊಸಬರೇ ಆಗಿದ್ದಾರೆ, ತಮಿಳಲ್ಲಿ ಒಂದೆರಡು ಚಿತ್ರಗಳನ್ನು ನಿದೇಶಿಸಿರುವ ಆರ್. ಗೋಪಿನಾಥ್ ಈ ಚಿತ್ರಕ್ಕೆ ಆಕ್ಷನ್‌ಕಟ್ ಹೇಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ,
ಇನ್ನು ಚೇತನ್ ಜೋಡಿದಾರ್, ಶ್ರೀನಿವಾಸ ನಾಯ್ಕ ಹಾಗೂ ನವೀನ್‌ಕುಮಾರ್ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇವರ ಜೋಡಿಯಾಗಿ ಶ್ರೀಮತಿ ಭಾರತಿ, ಶ್ರೀಮತಿ ಇಂದಿರಾ ಹಾಗೂ ಸೌಮ್ಯಶ್ರೀ ನಟಿಸಿದ್ದಾರೆ.
ಮೂವರು ಸ್ನೇಹಿತರು ಮಾಡುವ ಸಣ್ಣ ತಪ್ಪಿನಿಂದಾಗಿ, ತಾವು ಮಾಡದಿದ್ದ ಕೊಲೆಯ ಆರೋಪ ಹೊತ್ತು 14 ದಿನಗಳ ಕಾಲ ಪೋಲೀಸರ ವಶದಲ್ಲಿರಬೇಕಾಗುತ್ತದೆ. ಪೋಲೀಸ್ ಕಸ್ಟಡಿಯಿಂದ ಹೇಗೋ ತಪ್ಪಿಸಿಕೊಂಡು ಹೊರಬಂದು ಆ ಸ್ನೇಹಿತರು ನಿಜವಾದ ಕೊಲೆಗಾರರನ್ನು ಪತ್ತೆಹಚ್ಚಿ ಪೋಲೀಸರ ವಶಕ್ಕೆ ಒಪ್ಪಿಸುವ ಮೂಲಕ ಕೊಲೆ ಆರೋಪದಿಂದ ಮುಕ್ತರಾಗುತ್ತಾರೆ.
ಮರ್ಡರ್ ಮಿಸ್ಟ್ರಿ ಹಿನ್ನೆಲೆಯಾಗಿಟ್ಟುಕೊಂಡು ಹಾಸ್ಯದ ಮೂಲಕ ಪರಿಸರದ ಸಂರಕ್ಷಣೆಯ ಸಂದೇಶ ಹೇಳಲು ಚಿತ್ರತಂಡ ಪ್ರಯತ್ನಿಸಿದೆ. ಚೇತನ್‌ಕುಮಾರ್ ತಂದೆ ಎಂ.ಹೆಚ್. ಕೃಷ್ಣಮೂರ್ತಿ ಮಗನ ಪ್ರಯತ್ನಕ್ಕ ಬಂಡವಾಳ ಹೂಡುವುದರ ಮೂಲಕ ಬೆನ್ನೆಲುಬಾಗಿ ನಿಂತಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಟ, ನಿರ್ಮಾಪಕ ಚೇತನ್ ಚಿತ್ರರಂಗದಲ್ಲಿ ಕಲಾವಿದನಾಗಿ ಬೆಳೆಯಬೇಕು ಎನ್ನುವುದು ನನ್ನ ಬಹುದಿನಗಳ ಕನಸು, ನನ್ನ ತಂದೆ ಪಿಡಬ್ಲೂಡಿ ಕಂಟ್ರ್ಯಾಕ್ಟರ್, ಮೊದಲು ನಿನ್ನ ಓದನ್ನು ಮುಗಿಸಿಕೋ, ನಂತರ ಚಿತ್ರರಂಗದ ಆಸೆಗೆ ಕೈಹಾಕು ಎಂದವರು ನೀಡಿದ ಸಲಹೆಯಂತೆ ಸ್ಟಡಿ ಮುಗಿಸಿ ತಂದೆಯ ಜೊತೆ 12 ವರ್ಷ ಕೆಲಸ ಮಾಡಿದೆ.
ಈಗ ನಾನೇ ಸೇರಿಸಿಟ್ಟ ಒಂದಷ್ಟು ಹಣ ನೀಡಿ, ಸಿನಿಮಾ ಮಾಡು ಎಂದು ನನ್ನ ತಂದೆಯೇ ಬೆನ್ನುತಟ್ಟಿ ಕಳಿಸಿದ್ದಾರೆ. ಇನ್ನೂ ಕೆಲವರು ಸಿನಿಮಾಗೆ ಹೋದರೆ ನೀನು ಹಾಳಾಗಿ ಹೋಗ್ತೀಯ ಎಂದು ಹೆದರಿಸಿದರು. ಅದನ್ನೇ ನಾನು ಆಶೀರ್ವಾದ ಅಂತ ತೆಗೆದುಕೊಂಡೆ. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ ಕೊರೋನಾಗೂ ಮುಂಚೆಯೇ ಈ ಪ್ರಾಜೆಕ್ಟ್ ಆರಂಭಿಸುವ ಪ್ಲಾನ್ ಇತ್ತು. ಆದರೆ ಆಗಲಿಲ್ಲ, ಹಿಂದೆ ಮಾಡಿಕೊಂಡಿದ್ದ ಕಥೆ ಸ್ವಲ್ಪ ಸೀರಿಯಸ್ ಆಗಿತ್ತು.
ಈಗ ಕೋವಿಡ್ ಟೈಂನಲ್ಲಿ ಮನರಂಜನೆಯ ಮೂಲಕವಷ್ಟೇ ಜನರನ್ನು ಸೆಳೆಯಲು ಸಾಧ್ಯ ಎಂದರಿತು ಇಡೀ ಚಿತ್ರದ ಕಥೆಯನ್ನು ಕಾಮಿಡಿ ಎಂಟರ್‌ಟೈನರ್ ಆಗಿ ಬದಲಾಯಸಿಕೊಂಡಿzವೆ. ಮಿಸ್ಟ್ರಿ ಕಥೆಯಲ್ಲೂ ಪ್ರೇಕ್ಷಕರನ್ನು ನಗಿಸುವ ಪ್ರಯತ್ನದ ಜೊತೆಗೆ ಪರಿಸರ ಕಾಳಜಿ ಸಹ ಮೂಡಿಸಲಿzವೆ.
ಜನವರಿಯಲ್ಲಿ ಶೂಟಿಂಗ್ ಆರಂಭಿಸಿ ಬೆಂಗಳೂರು ಸುತ್ತಮುತ್ತ 15ರಿಂದ 20 ದಿನಗಳಲ್ಲಿ ಚಿತ್ರೀಕರಿಸುವ ಯೋಜನೆಯಿದೆ, ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳಾದ ಕಬ್ಬನ್ ಪಾರ್ಕ್. ಲಾಲ್‌ಬಾಗ್, ಬನ್ನೇರುಘಟ್ಟ ಪಾರ್ಕ್, ನಂದಿಬೆಟ್ಟ ಹೀಗೆ ಹಲವಾರು ಲೊಕೇಶನ್‌ಗಳು ನಮ್ಮ ಚಿತ್ರದ ಹೈಲೈಟ್ ಎಂದು ಹೇಳಿದರು.
ಚಿತ್ರದ ಮತ್ತೊಬ್ಬ ನಾಯಕ ಶ್ರೀನಿವಾಸ್ ನಾಯ್ಕ ಒಬ್ಬ ಹವ್ಯಾಸಿ ಕಲಾವಿದ, ಮೂರನೇ ನಾಯಕ ನವೀನ್‌ಕುಮಾರ್ ಕ್ಯಾಬ್‌ಡ್ರೈವರ್ ಕೆಲಸ ಮಾಡುತ್ತಲೇ ಅಭಿನಯದಲ್ಲಿ ತೊಡಗಿದ್ದಾರೆ. ಹಿಂದೆ ಸಾಗುವ ದಾರಿಯಲ್ಲಿ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಏನೂ ದುಡಿಮೆಯಿಲ್ಲದ ಸೋಮಾರಿಯಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇವರ ಪತ್ನಿ ಇಂದಿರಾ ಚಿತ್ರದಲ್ಲೂ ಜೋಡಿಯಾಗಿಯೇ ನಟಿಸಿದ್ದಾರೆ. ನೃತ್ಯಕಲಾವಿದೆ ಸೌಮ್ಯಶ್ರೀ, ಚೇತನ್ ಅವರ ಜೋಡಿಯಾಗಿದ್ದು, ಒಂದಷ್ಟು ಕಿರುಚಿತ್ರಗಳಲ್ಲಿ ಅಭಿನಯಿಸಿದ ಅನುಭವ ಇವರಿಗಿದೆ. ಚಿತ್ರದಲ್ಲಿ ಇವರದು ಗೃಹಿಣಿಯ ಪಾತ್ರ. ಶ್ರೀಮತಿ ಭಾರತಿ ಚಿತ್ರದಲ್ಲಿ ಒಬ್ಬ ಟೀಚರ್ ಪಾತ್ರವನ್ನು ನಿರ್ವಹಿಸಿದ್ದಾರೆ.
ತಮಿಳಲ್ಲಿ ಮೂರ್‍ನಾಲ್ಕು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿರುವ ಉದಯಕುಮಾರ್ ಮೂರು ಹಾಡುಗಳನ್ನು ಕಂಪೋಜ್ ಮಾಡಿದರೆ, ಶ್ರೀನಿವಾಸ ರೇವಣಕರ್ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ.
Be the first to comment